ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ..?

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಿ.ಜಗದೀಶ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸುದ್ದಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಆದೇಶಗಳು ಬಂದಿಲ್ಲ ಎಂದು ವರದಿಯು ಹೇಳಿದೆ.
ಮೂಲಗಳ ಪ್ರಕಾರ, ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಜನರು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಜಗದೀಶ್ ಅವರು 2019ರ ಆಗಸ್ಟ್ ನಲ್ಲಿ ಉಡುಪಿಯ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದರು.
ಅಪಾರ ಅಭಿಮಾನಿ ಬಳಗ ಹೊಂದಿರುವ ಜಿ ಜಗದೀಶ್ ಇದೆ ಸೆಪ್ಟೆಂಬರ್ ಗೆ ಅವರು ಉಡುಪಿ ಜಿಲ್ಲಾಧಿಕಾರಿಯಾಗಿ ಎರಡು ವರ್ಷಗಳನ್ನು ಪೂರೈಸಲಿದ್ದಾರೆ. ಇದರ ಮದ್ಯೆ ಜಿ.ಜಗದೀಶ್ ಅವರ ವರ್ಗಾವಣೆ ಕುರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಷಯದ ಸತ್ಯಾಸತ್ಯತೆ ಇನ್ನಷ್ಟೇ ಖಚಿತವಾಗಬೇಕಾಗಿದೆ.
ಕಡೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಜಗದೀಶ್ ಅವರು ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2006-07ರಲ್ಲಿ ಉಡುಪಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್, ಹೇಮಲತಾ ಅವರ ಸೇವಾವಧಿಯಲ್ಲಿ ಪ್ರೊಬೆಶನರಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದರು. ಐ.ಎ.ಎಸ್ ಶ್ರೇಣಿಗೆ ಭಡ್ತಿಗೊಂಡ ಬಳಿಕ ಜಗದೀಶ್ ಅವರು ಹಾಸನ ಜಿ.ಪಂ. ಸಿಇಒ, ಕೋಲಾರ ಜಿ.ಪಂ. ಸಿಇಒ, ಆದ ನಂತರದಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದರು