
ಬೆಳ್ತಂಗಡಿ: ಕಾಡು ಹಂದಿಯೊಂದನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುಡ್ತಲಾಜೆ ಸರಕಾರಿ ಜಾಗದಲ್ಲಿ ನಡೆದಿದೆ.
ಈ ಬಗ್ಗೆ ಕಳೆಂಜ ಶಾಖೆಯ ಉಪವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದಾಗ ಒಂದು ಕಾಡು ಹಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪಕ್ಕದಲ್ಲಿ ಒಂದು ಪರವಾನಿಗೆ ಇದ್ದ ಬಂದೂಕು, ಮೂರು ಸಜೀವ ಗುಂಡು, ಒಂದು ಉಪಯೋಗಿಸಿದ ಗುಂಡು ಕೂಡ ಪತ್ತೆಯಾಗಿದೆ. ಆರೋಪಿ ಸುಜಯ್ ಗೌಡ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸಾವನ್ನಪ್ಪಿದ ಹಂದಿಯನ್ನು ಸ್ಥಳ ಮಹಜರು ನಡೆಸಿ ಕಾನೂನು ರೀತಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.