
ಬೈಂದೂರು: ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದನ್ನು ಮಿಂಚಿನ ಕಾರ್ಯಾಚರಣೆ ಮೂಲಕ ತಡೆದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಖಚಿತ ಮಾಹಿತಿಯಂತೆ ಬೈಂದೂರಿನಿಂದ ವಾಹನವನ್ನು ಹಿಂಬಾಲಿಸಿದ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿ ನೇತೃತ್ವದ ತಂಡವು ಭಟ್ಕಳದಲ್ಲಿ ವಾಹನವನ್ನು ಅಡ್ಡಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಶಬ್ಬೀರ್( 35 ) ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದ ಗೋವುಗಳನ್ನು ಬೈಂದೂರು ಪೋಲಿಸ್ ವಸತಿ ಗೃಹದಲ್ಲಿ ಉಪಚರಿಸಲಾಯಿತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.