
ಉಡುಪಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿನ ಅವಶ್ಯಕತೆಯಿರುವುದರಿಂದ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.
250 ಬೆಡ್ ಗಳ ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದಿನಾಂಕ 12-08-2021 ರಂದು ಭಾಗವಹಿಸಿ ಅವರು ಈ ಮನವಿಯನ್ನು ಮಾಡಿದರು.
ಉಡುಪಿಯ ಕೊಳಲಗಿರಿಯಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 32 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ವೈದ್ಯಕೀಯ ಕಾಲೇಜು ಮಂಜೂರಾದರೆ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಸದೃಢವಾಗುತ್ತದೆ ಎಂದು ಹೇಳಿದ ಅವರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವರ್ಣ ನದಿಗೆ ಬ್ಯಾರೇಜ್ ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಈ ಯೋಜನೆಯಿಂದ ಸಮರ್ಪಕ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರಿನ ಅವಶ್ಯಕತೆಯನ್ನು ಪೂರೈಸುವ ಜತೆಯಲ್ಲಿ ಉಪ್ಪುನೀರು ತಡೆಯಬಹುದಾಗಿದೆ. ಈ ಯೋಜನೆಗೆ ಅನುಮೋದನೆ ನೀಡುವ ಬೇಡಿಕೆ ಹಾಗೂ ಉಡುಪಿ ನಗರದ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸೂಕ್ತ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ಅವರು ಈ ಎಲ್ಲಾ ಯೋಜನೆಗಳನ್ನು ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.