
ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳ ಜಾರಿ ಸಂಬಂಧ ತಜ್ಞರು, ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದ್ಯಕ್ಕೆ ಲಾಕ್ ಡೌನ್ ಆಗಲಿ ಅಥವಾ ವೀಕೆಂಡ್ ಕರ್ಫ್ಯೂ ಬೇಡ, ಮುಂದಿನ ಎರಡು ವಾರ ಈಗ ಜಾರಿಯಲ್ಲಿರುವ ಕೋವಿಡ್ ನಿಯಮಗಳನ್ನೇ ಮುಂದುವರಿಸುವಂತೆ ಸೂಚಿಸಿದ್ದಾರೆ.
ಕೊರೋನಾ 2ನೇ ಅಲೆ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ, ಸೋಂಕು ಹೆಚ್ಚು ಇರುವ ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭಿಸುವಂತೆಯೂ ತಿಳಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಜ್ಞರ ಜೊತೆಗೆ ಸುಧೀರ್ಘವಾದ ಚರ್ಚೆಯಾಗಿದೆ. ನೆರೆಯ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸ್ಥಿತಿಗತಿ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ವಿವರವಾದ ವರದಿ ನೀಡಿದ್ದಾರೆ. ಕೋವಿಡ್ ಎರಡನೇ ಹಂತ ಇನ್ನೂ ಪೂರ್ಣಗೊಂಡಿಲ್ಲ, ಹೀಗಾಗಿ ನಾವು ಮುಂಜಾಗ್ರತೆ ವಹಿಸಬೇಕಾಗಿದೆ. ಶಾಲೆಗಳ ಬಗ್ಗೆ ಚರ್ಚೆಯಾಗಿದೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವುದು ಬೇಡ, ಪಾಟಿವಿವಿಟಿ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಪೋಷಕರು, ಶಿಕ್ಷಕರು, ಸಿಬ್ಬಂದಿಗಳು ಲಸಿಕೆ ಪಡೆದುಕೊಂಡಿರಬೇಕು, ಶಾಲೆ ಆರಂಭವಾದ ಬಳಿಕ ಪಾಸಿಟಿವಿಟಿ ದರ 2 ಕ್ಕಿಂತ ಹೆಚ್ಚಾದಲ್ಲಿ ಮತ್ತೆ ಶಾಲೆಗಳನ್ನು ಬಂದ್ ಮಾಡಲಾಗುವುದು, ಕೋವಿಡ್ ಪ್ರಕರಣಗಳು ಹೆಚ್ಚಿರುವ 8 ಜಿಲ್ಲೆಗಳಲ್ಲಿ ಮತ್ತೆ ವಾರಾಂತ್ಯದ ಕರ್ಫ್ಯೂ ಮುಂದುವರೆಯಲಿದೆ ಎಂದು ಸ್ಪಷಪಡಿಸಿದರು. ದಕ್ಷಿಣ ಕನ್ನಡ, ಕಲಬುರ್ಗಿ, ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರೆಯಲಿದೆ ಎಂದರು.
ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ ಈ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಪರೀಕ್ಷೆ, ಲಸಿಕೆ ನೀಡಿಕೆ ಹೆಚ್ಚಿಸಲಾಗುವುದು ಗಡಿ ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿಯೂ ಕೊರೋನಾ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಬ್ಬದ ದಿನದಲ್ಲಿ ಹೆಚ್ಚು ಜನ ಒಂದೇ ಕಡೆ ಸೇರದಂತೆ ಎಚ್ಚರವಹಿಸಬೇಕು ಅಲ್ಲದೆ ಹಬ್ಬಗಳ ಆಚರಣೆ ಬಗ್ಗೆ ಈ ಹಿಂದಿನ ಮಾರ್ಗಸೂಚಿಗಳೇ ನೀತಿ ಮುಂದುವರಿಯಲಿದೆ. ರಾಜ್ಯದಲ್ಲಿ ಕೊರೋನ ಪರೀಕ್ಷೆಯನ್ನು ಹೆಚ್ಚಿಸಿ, ಇದರ ಜೊತೆಗೆ ಲಸಿಕೆ ನೀಡಿಕೆ ವೇಗ ಹೆಚ್ಚಿಸಲಾಗುವುದು ಎಂದರು.