
ಮಂಗಳೂರು : ಮಲ್ಲಿಕಟ್ಟೆ ವೃತ್ತದಲ್ಲಿ ಇಂದು ಚಲಿಸುತ್ತಿದ್ದ ಬಸ್ ಮೇಲೆ ತೆಂಗಿನ ಮರವೊಂದು ಬಿದ್ದ ಘಟನೆ ನಡೆದಿದೆ. ಬಸ್ ಮೇಲೆ ತೆಂಗಿನ ಮರ ಬಿದ್ದ ಕೂಡಲೇ ಬಸ್ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳಾದೇವಿ- ಸುರತ್ಕಲ್ ನಡುವೆ ಚಲಿಸುವ ಖಾಸಗಿ ಬಸ್ ಮೇಲೆ ಈ ತೆಂಗಿನ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ತಂಡ ಅಗಮಿಸಿ ಬಸ್ ಮೇಲೆ ಬಿದ್ದ ತೆಂಗಿನ ಮರವನ್ನು ತೆರವುಗೊಳಿಸಿದರು. ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮತ್ತು ಮಾಜಿ ಮೇಯರ್ ಶಶಿಧರ ಹೆಗ್ಡೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.