ಮಂಗಳೂರು:ಪ್ರಿಯತಮನೊಂದಿಗೆ ಸೇರಿ ಪತಿಯ ಹತ್ಯೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ, ಮತ್ತು ದಂಡ..!

ಮಂಗಳೂರು: ಪ್ರಿಯತಮನೊಂದಿಗೆ ಸೇರಿ ಸಂಚು ರೂಪಿಸಿ ಪತಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.
ಮೂಡುಬಿದಿರೆ ತಾಲೂಕಿನ ಕುಕ್ಕುದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೊಳಗಾದವರು. ಜಯರಾಜ್ ಕೊಲೆಯಾದವರು.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರು ನಿವಾಸಿ ಜಯರಾಜ್ ಅವರು ಅಶ್ವಿನಿಯನ್ನು ವಿವಾಹವಾಗಿದ್ದರು. ಆದರೆ ಅಶ್ವಿನಿ ತನ್ನ ತವರು ಮನೆಯ ಸಮೀಪದ ಆನಂದ ಮೇರನೊಂದಿಗೆ ಸಂಬಂಧವಿರಿಸಿಕೊಂಡಿದ್ದರು. ಇದರಿಂದ ಜಯರಾಜ್ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು. ಆದರೆ ಹೆರಿಗೆಗೆಂದು ತಾಯಿ ಮನೆಯಲ್ಲಿದ್ದ ಅಶ್ವಿನಿಯು 2016ರ ಸೆಪ್ಟಂಬರ್ 13ರಂದು ಪತಿ ಜಯರಾಜ್‌ನನ್ನು ಹಣ ನೀಡುವುದಾಗಿ ನಂಬಿಸಿ ಜಯರಾಜ್‌ನನ್ನು ಮನೆಗೆ ಕರೆಸಿಕೊಂಡು, ಆನಂದ ಮೇರನೊಂದಿಗೆ ಸೇರಿ ಹತ್ಯೆ ಮಾಡಿದ್ದಳು. ಜಯರಾಜ್‌ನ ಮೊಬೈಲ್ ಪೋನ್, ಎಟಿಎಂ ಕಾರ್ಡ್ ಇತ್ಯಾದಿ ವಸ್ತುಗಳನ್ನು ತೆಗೆದಿಟ್ಟುಕೊಂಡು ಮೃತದೇಹವನ್ನು ಪಾಳುಬಾವಿಗೆ ಹಾಕಿದ್ದರು. ಈ ಬಗ್ಗೆ ದೂರು ದಾಖಲಾಗಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿದ ಮೂಡುಬಿದಿರೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿಯವರು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆನಂದ ಮೇರ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಜೈಲು ಶಿಕ್ಷೆ, ಸಾಕ್ಷನಾಶ ಪ್ರಕರಣಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 10,000 ರೂ.ನ್ನು ಜಯರಾಜ್ ಅವರ ತಾಯಿಗೆ ನೀಡುವಂತೆ ಹಾಗೂ ಜಯರಾಜ್ ಅವರ ಮಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.