ಮಂಗಳೂರು – ದುಬೈ ವಿಮಾನಯಾನ ಆರಂಭ : ಏರ್‌ಪೋರ್ಟ್‌ನಲ್ಲೇ RTPCR ಟೆಸ್ಟ್…!

ಮಂಗಳೂರು : ಹಲವು ತಿಂಗಳುಗಳ ಬಳಿಕ ಮಂಗಳೂರು – ದುಬೈ ನಡುವೆ ಇಂದಿನಿಂದ ವಿಮಾನಯಾನ ಆರಂಭಗೊಂಡಿದೆ.
ಅಲ್ಲದೇ ಪ್ರಯಾಣಿಕರ ಒತ್ತಡಕ್ಕೆ ಮಂಗಳೂರು ಏರ್‌ಪೋರ್ಟ್ ಮಣಿದಿದ್ದು, ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲು ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗಿದೆ.
ಏರ್‌ಇಂಡಿಯಾ ಎಕ್ಸ್ ಪ್ರೆಸ್‌ನ ಮೊದಲ ವಿಮಾನವು ಇಂದು ದುಬೈಗೆ ತೆರಳಲಿದೆ. ಆದರೆ ವಿಮಾನವು ಮಂಗಳೂರಿನಿಂದ ಕೇರಳದ ತಿರುವನಂತಪುರ ಮೂಲಕ ದುಬಾೖ ತಲುಪಲಿದೆ. ಆ. 20ರಂದು ಮಂಗಳೂರಿನಿಂದ ದುಬಾೖಗೆ ನೇರ ವಿಮಾನ ಆರಂಭಗೊಳ್ಳಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗಾಗಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಯುಎಇ ಭಾರತದ ವಿಮಾನಗಳ ಹಾರಾಟಕ್ಕೆ ನಿರ್ಬಂಧವನ್ನು ಹೇರಿತ್ತು. ಆದರೆ ಆ. 5ರಂದು ಯುಎಇ ಹೊರಡಿಸಿದ್ದ ನಿರ್ಬಂಧವನ್ನು ವಾಪಸ್ ಪಡೆದಿದೆ. ಇದರಿಂದಾಗಿ ಗಲ್ಪ್ ರಾಷ್ಟ್ರಗಳಲ್ಲಿ ಕೊರೊನಾದಿಂದಾಗಿ ಬಂಧಿಯಾಗಿರುವ ಪ್ರಯಾಣಿಕರು ಸ್ವದೇಶಕ್ಕೆ ಮರಳಲು ಅವಕಾಶ ದೊರೆತಂತಾಗಿದೆ.
ಯುಎಇ ಭಾರತದಿಂದ ಬರುವ ಪ್ರಯಾಣಿಕರು ಹೊರಡುವ 48 ಗಂಟೆ ಮೊದಲು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು 4 ಗಂಟೆ ಮೊದಲು ನಡೆಸಿದ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತರುವಂತೆ ಆದೇಶ ಹೊರಡಿಸಿದೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ನಡೆಸುವ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು, ಕೊರೊನಾ ಟೆಸ್ಟ್‌ಗೆ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ನಡೆಸಲು ಅತ್ಯಾಧುಕಿನ ಯಂತ್ರವನ್ನು ಅಳವಡಿಸಲಾಗಿದೆ.