ಉಡುಪಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶತಾಯುಷಿ ಡೋಲು ಕಲಾವಿದ ಗುರುವ ಕೊರಗ ಇನ್ನಿಲ್ಲ…!

ಉಡುಪಿ: ಖ್ಯಾತ ಡೋಲು ಕಲಾವಿದ ಗುರುವ ಕೊರಗ(105) ಇನ್ನಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ.
ಡೋಲು ಕಲಾವಿದರಾಗಿ ಅವರು ಖ್ಯಾತಿ ಗಳಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿತ್ತು. ಹಿರಿಯಡ್ಕ ಸಮೀಪದ ಗುಡ್ಡೆ ಅಂಗಡಿ ನಿವಾಸಿಯಾಗಿದ್ದ ಗುರುವ ಕೊರಗ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ದೇವಸ್ಥಾನಗಳ ಜಾತ್ರೆಗಳಲ್ಲಿ ಡೋಲು ಬಾರಿಸುತ್ತಿದ್ದರು.
12ನೇ ವಯಸ್ಸಿನಲ್ಲಿ ಡೋಲು ಬಾರಿಸಲು ಆರಂಭಿಸಿದ ಗುರುವ ಕೊರಗ ಅವರು, ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು
ಇವರ ಸಾಧನೆಗೆ 2018ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2017ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಕೂಡ ಲಭಿಸಿದೆ. ಅಲ್ಲದೆ ಹಲವು ಗೌರವ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ. ಕೊರಗ ಸಮುದಾಯಕ್ಕೆ ಪ್ರಪ್ರಥಮ ರಾಜ್ಯೋತ್ಸವ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಯೂ ಇವರಿಗೆ ಸಲ್ಲುತ್ತದೆ.