ಮೈಸೂರು ಅತ್ಯಾಚಾರ ಪ್ರಕರಣ : ಬಾಲಾಪರಾಧಿ ಸೇರಿ 5 ಮಂದಿಯ ಬಂಧನ : ಡಿಜಿ ಐಜಿಪಿ ಪ್ರವೀಣ್ ಸೂದ್, ಅಧಿಕೃತ ಮಾಹಿತಿ

ಮೈಸೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಐಜಿಪಿ ಪ್ರವೀಣ್ ಸೂದ್. ಸುದ್ದಿಗೋಷ್ಠಿ ನಡೆಸಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದು, ಕಾರ್ಮಿಕರಾಗಿರುವ ಇವರು ತಮಿಳುನಾಡಿನ ಮೂಲದವರು ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಒಬ್ಬ ಬಾಲಾಪರಾಧಿ ಇರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಆದರೆ, ಅದು ಹೆಚ್ಚಿನ ತನಿಖೆಯಿಂದಲೇ ಗೊತ್ತಾಗಬೇಕು ಎಂದಿದ್ದಾರೆ.
ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಎಲ್ಲರೂ ತಿರುಪುರ ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ. ಡ್ರೈವರ್, ಕಾರ್ಪೆಂಟರ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬ ಬಾಲಕ 17 ವರ್ಷದವನಿದ್ದಾನೆ ಆದರೆ, ಅದು ಇನ್ನೂ ಖಚಿತವಾಗಬೇಕಿದೆ ಎಂದು ಹೇಳಿದ್ದಾರೆ.
ಇದರಲ್ಲಿ ಓರ್ವ ಬಾಲಾಪರಾಧಿ ಇದ್ದರೂ ಈ ಹಿಂದಿನ ಪ್ರಕರಣಗಳಂತೆ ಆಗುವುದಿಲ್ಲ. ಏಕೆಂದರೆ, ಬಾಲಕಾಯ್ದೆಯಲ್ಲೂ ಬದಲಾಗಿದೆ. ಗಂಭೀರ ಪ್ರಕರಣದಲ್ಲಿ 16 ವರ್ಷ ಆಗಿದ್ದರೆ ನ್ಯಾಯಾಲಯದಲ್ಲಿ ವಿಚಾರಣೆ ಆಗಲಿದೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲರೂ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ವಾಪಸ್ಸು ಹೋಗುವಾಗ ಕುಡಿದು ಪಾರ್ಟಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸುವೆ. ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.