ಜೋಕಟ್ಟೆ : ರೈಲಿನಡಿಗೆ ಬೀಳುತ್ತಿದ್ದ ಆಡಿನ ಮರಿ ರಕ್ಷಿಸಲು ಹೋಗಿದ್ದ ಯುವಕ ತಂದುಕೊಂಡ ದುರಂತ !

ರೈಲು ಹಳಿ ದಾಟುತ್ತಿದ್ದಾಗ, ಅಲ್ಲೊಂದು ಆಡು ಮರಿ ಹಳಿಯ ಉದ್ದಕ್ಕೂ ಓಡುವುದು ಕಾಣಿಸಿತ್ತು. ಅದೇ ಸಂದರ್ಭದಲ್ಲಿ ದೂರದಲ್ಲಿ ರೈಲುಬರುತ್ತಿದ್ದುದನ್ನು ಗಮನಿಸಿದ ಚೇತನ್ ಕುಮಾರ್, ಆಡು ಮರಿಯ ರಕ್ಷಣೆಗೆ ಧಾವಿಸಿದ್ದಾನೆ. ಚೇತನ್ ಕಾಲಿನ ಮೇಲಿಂದಲೇ ರೈಲು ಹರಿದು ಹೋಗಿದ್ದು, ಎರಡೂ ಕಾಲುಗಳು ತುಂಡಾಗಿ ಬಿದ್ದಿವೆ.
ಮಂಗಳೂರು, ಆಗಸ್ಟ್ 28: ಆತ ಕೇವಲ 21ರ ಯುವಕ. ಹೆಸರು ಚೇತನ್ ಕುಮಾರ್. ಮನೆಯಲ್ಲಿನ ಬಡತನ ಮತ್ತು ದುಡಿಯುವ ಅನಿವಾರ್ಯತೆಯಿಂದಾಗಿ ಸಣ್ಣ ವಯಸ್ಸಿನಲ್ಲೇ ಉದ್ಯೋಗಕ್ಕೆ ಇಳಿಸಲ್ಪಟ್ಟಿದ್ದ. ಬಸ್ ಕ್ಲೀನರ್ ಕೆಲಸ ಮಾಡುತ್ತಲೇ ಕಷ್ಟದಲ್ಲಿ ಕಾಲೇಜು ಓದಿದ್ದ ಯುವಕ ಒಂದೂವರೆ ವರ್ಷದಿಂದ ಬಸ್ ಕಂಡಕ್ಟರನಾಗಿ ಸೇರಿಕೊಂಡಿದ್ದ. ಐದು ಮಕ್ಕಳಲ್ಲಿ ಹಿರಿಯವನಾಗಿದ್ದ ಈತನ ದುಡಿಮೆಯಿಂದಲೇ ಮನೆ ನಡೆಯಬೇಕಾಗಿತ್ತು.
ಚೇತನ್ ಕುಮಾರ್ ಮನೆ ಇರುವುದು ಮಂಗಳೂರು ಹೊರವಲಯದ ಬೈಕಂಪಾಡಿ ಬಳಿಯ ಜೋಕಟ್ಟೆ ಸಮೀಪದ ಅಂಗರಗುಂಡಿ ಎಂಬಲ್ಲಿ. ಹೆದ್ದಾರಿಯಿಂದ ಮನೆಗೆ ತೆರಳಬೇಕಿದ್ದರೆ ಮೂರು ಕಿಮೀ ನಡೆಯಬೇಕಿತ್ತು. ದಿನವೂ ಬೆಳಗ್ಗೆ ಮೂರು ಕಿಮೀ ನಡೆದುಕೊಂಡೇ ಜೋಕಟ್ಟೆಯ ರೈಲು ಹಳಿಯನ್ನು ದಾಟಿಕೊಂಡು ಕೆಲಸಕ್ಕೆ ಬರುತ್ತಿದ್ದ. ಇಂದು ವೀಕೆಂಡ್ ಲಾಕ್ಡೌನ್ ಇದ್ದ ಕಾರಣ ಬಸ್ಸಿಗೆ ಜನ ಇರಲ್ಲ ಎಂದುಕೊಂಡು ತಡವಾಗಿ ಬಸ್ ಬಿಡಲು ನಿರ್ಧರಿಸಿದ್ದರು.
ಹಾಗಾಗಿ ಬೆಳಗ್ಗೆ 8.30ರ ಸುಮಾರಿಗೆ ನಡೆದುಕೊಂಡು ಬಂದು ಜೋಕಟ್ಟೆಯ ರೈಲು ಹಳಿ ದಾಟುತ್ತಿದ್ದಾಗ, ಅಲ್ಲೊಂದು ಆಡು ಮರಿ ಹಳಿಯ ಉದ್ದಕ್ಕೂ ಓಡುವುದು ಕಾಣಿಸಿತ್ತು. ಅದೇ ಸಂದರ್ಭದಲ್ಲಿ ದೂರದಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ ಚೇತನ್ ಕುಮಾರ್, ಆಡು ಮರಿಯ ರಕ್ಷಣೆಗೆ ಧಾವಿಸಿದ್ದಾನೆ. ಓಡುತ್ತಲೇ ಆಡಿನ ಮರಿಯನ್ನು ಹೊರಕ್ಕೆ ದೂಡಿದ ಚೇತನ್ ಕುಮಾರ್ ಹಳಯಿಂದ ಹೊರಬೀಳುವಷ್ಟರಲ್ಲಿ ರೈಲು ಧಾವಿಸಿ ಬಂದಿದೆ. ಚೇತನ್ ಕಾಲಿನ ಮೇಲಿಂದಲೇ ರೈಲು ಹರಿದು ಹೋಗಿದ್ದು, ಎರಡೂ ಕಾಲುಗಳು ತುಂಡಾಗಿ ಬಿದ್ದಿವೆ.
ಕೆಲವೇ ಕ್ಷಣಗಳಲ್ಲಿ ಘಟನೆ ನಡೆದು ಹೋಗಿದ್ದು ಆಡಿನ ಮರಿಯನ್ನು ರಕ್ಷಿಸಲು ಹೋಗಿದ್ದ ಯುವಕ ದುರಂತವನ್ನೇ ತಂದುಕೊಂಡಿದ್ದಾನೆ. ಕೂಡಲೇ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪರಿಶೀಲಿಸಿ ಎರಡೂ ಕಾಲು ತುಂಡಾಗಿರುವುದನ್ನು ತಿಳಿಸಿದ್ದಾರೆ. ಯುವಕನ ದುಡಿಮೆಯಿಂದಲೇ ಬದುಕುತ್ತಿದ್ದ ಬಡ ಕುಟುಂಬಕ್ಕೆ ಈ ಘಟನೆಯಿಂದಾಗಿ ದಿಕ್ಕೇ ತೋಚದಂತಾಗಿದೆ.
ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರು ಶಾಲೆ, ಕಾಲೇಜು ಕಲಿಯುತ್ತಿದ್ದಾರೆ. ತಂದೆ, ತಾಯಿ ಮತ್ತು ಇತರ ಮಕ್ಕಳಿಗೆಲ್ಲ ಅಣ್ಣನ ದುಡಿಮೆಯೇ ಆಧಾರವಾಗಿತ್ತು. ಸಣ್ಣ ವಯಸ್ಸಿನಲ್ಲೇ ಕುಟುಂಬಕ್ಕೆ ಆಸರೆಯಾಗಿದ್ದ ಯುವಕನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಎದ್ದು ನಡೆಯಲಾಗದ ಸ್ಥಿತಿ ಎದುರಾಗಿದೆ. ಸ್ವಲ್ಪ ಖರ್ಚು ಮಾಡಿದರೆ, ಒಂದು ಕಾಲನ್ನು ಉಳಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಕ್ಷೇತ್ರದ ಶಾಸಕರು ಮತ್ತು ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿ ಚೇತನ್ ಕುಮಾರ್ ಕುಟುಂಬ ಇದೆ.