ಉಡುಪಿ : ಸಂತೆಕಟ್ಟೆ ಚೂರಿ ಇರಿತ ಪ್ರಕರಣ ಯುವತಿ ಬಳಿಕ ಭಗ್ನ ಪ್ರೇಮಿ ಯುವಕನೂ ಸಾವು

ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ಕೊಲೆಗೈದು ಬಳಿಕ ಅದೇ ಚೂರಿಯಿಂದ ಕತ್ತು ಕೊಯ್ದುಕೊಂಡಿದ್ದ ಪ್ರಿಯಕರ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ಆರೋಪಿ ಪ್ರಿಯಕರನನ್ನು ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಐಡಿಯಲ್ ಮೆಡಿಕಲ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಈತ ನಿನ್ನೆ ಮೃತಪಟ್ಟ ಸೌಮಶ್ರೀಯನ್ನು ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆದರೆ ಯುವತಿಗೆ ಕೆಲ ದಿನಗಳ ಹಿಂದೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಕುಪಿತಗೊಂಡ ಸಂದೇಶ್ ನಿನ್ನೆ ಸಂಜೆ ಉಡುಪಿ ಸಂತೆಕಟ್ಟೆ ಸಮೀಪದ ರೋಬೊ ಸಾಪ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮನೆಗೆ ಹೋಗುತ್ತಿದ್ದ ಪ್ರೇಯಸಿ ಸೌಮ್ಯಶ್ರೀಯನ್ನು ತಡೆದು ನಿಲ್ಲಿಸಿದ್ದನು. ಆಗ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು.
ಇಬ್ಬರ ನಡುವಿನ ಜಗಳ ತಾರಕಕ್ಕೇರಿದಾಗ ಕೋಪದಿಂದ ಮನಸ್ಸಿನ ನಿಯಂತ್ರಣ ಕಳೆದುಕೊಂಡ ಸಂದೇಶ್ ಚಾಕು ತೆಗೆದು ಸೌಮ್ಯಶ್ರೀ ಸ್ಥಳದಲ್ಲೇ ಇರಿದಿದ್ದಾನೆ. ಇದರಿಂದ ಸೌಮ್ಯಶ್ರೀ ದ್ವಿಚಕ್ರವಾಹನದಿಂದ ಕೆಳಗೆ ಕುಸಿದು ಬಿದ್ದು ಒದ್ದಾಡಲು ಆರಂಭಿಸಿದ್ದಾಳೆ. ಇದನ್ನು ನೋಡಿ ಪಾಗಲ್ ಪ್ರೇಮಿಯೂ ನಂತರ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಇಬ್ಬರು ಒದ್ದಾಡುವುದನ್ನು ನೋಡಿದ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರ ಗಾಯಗೊಂಡ ಯುವತಿ ಹಾಗೂ ಯುವಕ ಸಂದೇಶ್ ಕುಲಾಲ್ ನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿಸಲಾಗಿತ್ತಾದರೂ ಯುವತಿ ಅತೀವ ರಕ್ತಸ್ರಾವದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದು, ಯುವಕ ಸಂದೇಶ್ ಕುಲಾಲ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.