ಅಡುಗೆ ಅನಿಲ ದರ ತಿಂಗಳಲ್ಲಿ ಎರಡನೇ ಸಲ ಏರಿಕೆ .!

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹೊರೆಯ ನಡುವೆಯೇ ಇಂದಿನಿಂದ ಅನ್ವಯವಾಗುವಂತೆ ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಮತ್ತೆ 25 ರೂಪಾಯಿಯಂತೆ ಪೆಟ್ರೋಲ್ ಕಂಪೆನಿಗಳು ಹೆಚ್ಚಳ ಮಾಡಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ.
ಜುಲೈನಲ್ಲಿ ಡೊಮೆಸ್ಟಿಕ್ ಸಿಲಿಂಡರ್ ದರ 834 ರೂಪಾಯಿ ಇತ್ತು. ಜನವರಿ 1ರಿಂದ ಆಗಸ್ಟ್ 17 ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ದರ ತಲಾ 165 ರೂಪಾಯಿಯಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ ಈಗ 884.50 ರೂಪಾಯಿಗೆ ಹೆಚ್ಚಳವಾದಂತಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಪ್ರತಿ ಎಲ್‍ಪಿಜಿ ಸಿಲಿಂಡರ್ ಬೆಲೆ ಇದೀಗ 862.50 ರೂಪಾಯಿಗೆ ಏರಿಕೆಯಾಗಿದೆ.ಕಳೆದ ಒಂದು ತಿಂಗಳೊಳಗೆ ತೈಲ ಕಂಪೆನಿಗಳು ಸತತ ಎರಡನೇ ಬಾರಿಗೆ ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಿದಂತಾಗಿದೆ. ಜುಲೈ 1ರಂದು ಸಿಲಿಂಡರ್ ಬೆಲೆ 25.50 ರೂ. ಹೆಚ್ಚಿಸಲಾಗಿತ್ತು. ಆಗಸ್ಟ್ 18ರಂದು ಮತ್ತೊಮ್ಮೆ 25 ರೂ. ಹೆಚ್ಚಳವಾಗಿತ್ತು. ಇದೀಗ ಸೆಪ್ಟೆಂಬರ್ 1ರಂದು ಮತ್ತೆ 25 ರೂಪಾಯಿ ಏರಿಕೆ ಮಾಡಲಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿ ಪ್ರತಿ ಸಿಲಿಂಡರ್ ಬೆಲೆಯನ್ನು 19 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಇದೀಗ ಪ್ರತಿ ಸಿಲಿಂಡರ್ ಬೆಲೆ 1,693 ರೂಪಾಯಿಗೆ ಹೆಚ್ಚಳವಾದಂತಾಗಿದೆ ಎಂದು ಎಎನ್ ಐ ವರದಿ ಮಾಡಿದೆ.