
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾಗಿದೆ. ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವುದರಿಂದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ಸಹಕಾರಿಯಾಗಲಿದೆ. ಕೈಗಾರಿಕೋದ್ಯಮ, ವೃತ್ತಿಪರ ನೌಕರರು, ದಿನಕೂಲಿ ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಇನ್ನಿತರ ವರ್ಗದ ಜನರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ವಾರಾಂತ್ಯದ ಕರ್ಫ್ಯೂ ರದ್ದುಪಡಿಸುವಂತೆ ಸಾರ್ವಜನಿಕ ವಲಯದ ಮನವಿಯ ಮೇರೆಗೆ ಸಚಿವ ಕೋಟ, ಶಾಸಕ ವೇದವ್ಯಾಸ್ ಕಾಮತ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಕೋವಿಡ್ ನಿಯಮಗಳನ್ನು ಸ್ವಯಂಪ್ರೇರಿತರಾಗಿ ಪಾಲಿಸಿ ಕೋವಿಡ್ ನಿಯಂತ್ರಣಕ್ಕಾಗಿ ಕೈಜೋಡಿಸುವಂತೆ ಜಿಲ್ಲೆಯ ಜನರಲ್ಲಿ ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.