ಕರಾವಳಿ

ತಾಯಿ, ಅಜ್ಜಿ, ಮುತ್ತಜ್ಜಿಯ ನೆನಪಿಗಾಗಿ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪಿಸಿ ಮಾತೃ ಪ್ರೇಮ ಮೆರೆದ ಮಕ್ಕಳು

ಕಾಪು : ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಠಾಪಿಸುವ ಮೂಲಕ ಮುಂಬಯಿಯಲ್ಲೇ ಹುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ. ಕಾಪು ಗರಡಿಮನೆ ಕುಟುಂಬದ ಅಗಲಿದ ಮೂರು ತಲೆಮಾರಿನ ಹಿರಿಯ ಸದಸ್ಯರಿಗೆ ಗೌರವ ಸಲ್ಲಿಸಲಾಗಿದೆ.

ತಾಯಿಯೇ ಸರ್ವಸ್ವ, ಹಿರಿಯರ ಆಶೀರ್ವಾದವೇ ತಮ್ಮ ಜೀವನಕ್ಕೆ ಆಧಾರ ಎಂದು ತಿಳಿದಿರುವ ಮಕ್ಕಳು ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ ಸದಸ್ಯರಾದ ಗೀತಾ ಯಾದವ್ ಪೂಜಾರಿ (೫೩), ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ (೫೨), ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ (೮೦) ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅಪ್ರತಿಮ ಸಮಾಜ ಸೇವಕಿ : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಜನತೆಯ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದು, ಜನರಿಗೆ ಉಚಿತ ಆಂಬುಲೆನ್ಸ್, ಊಟ, ಮಾಸ್ಕ್, ಸ್ಯಾನಿಟೈಸರ್ ಸಹಿತವಾದ ವಿವಿಧ ಸೊತ್ತುಗಳನ್ನು ವಿತರಿಸಿದ್ದ ಅವರು ಕಳೆದ ವರ್ಷ ಸೆ. ೩ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.

27 ಲಕ್ಷ ರೂ. ವೆಚ್ಚ : ಗೀತಾ ಯಾದವ್, ಕಲ್ಯಾಣಿ ಪೂಜಾರ್ತಿ ಮತ್ತು ಮುತ್ತಕ್ಕ ಬೈದಿ ಪೂಜಾರ್ತಿ ಅವರ ನೆನಪಿನಲ್ಲಿ ನಿರ್ಮಿಸಲಾದ ಮಂದಿರವನ್ನು ಗೀತಾ ಯಾದವ್ ಅವರ ವರ್ಷಾಂತಿಕದ ದಿನವಾದ ಸೆ. ೩ರಂದು ಉದ್ಘಾಟಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಪಿಂಕ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದ್ದು, ಪುತ್ಥಳಿ (ಮೂರ್ತಿ) ಕೆತ್ತನೆಗೆ ವೈಟ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದೆ. ಗುಡಿ ನಿರ್ಮಾಣ, ಪುತ್ಥಳಿ ರಚನೆ, ಮಂದಿರದ ಅಽಷ್ಟಾನದೊಳಗೆ ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ ೨೭ ಲಕ್ಷ ರೂ. ಖರ್ಚಾಗಿದೆ. ರಾಜಸ್ಥಾನದ ಜೈಪುರದ ಕಾರ್ಮಿಕರ ತಂಡವು ಗುಡಿ ನಿರ್ಮಾಣ ಮತ್ತು ಮೂರ್ತಿ ಕೆತ್ತನಾ ಕಾರ್ಯಗಳ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು ೩ ತಿಂಗಳು ೨೨ ದಿನಗಳ ಕಾಲ ಹಿಡಿದಿದೆ.

ಮಾಜಿ ಕಾರ್ಪೋರೇಟರ್ ಗೀತಾ ಯಾದವ್ ಪೂಜಾರಿ ಅವರ ನೆನಪಿನಲ್ಲಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯ ಪುತ್ಥಳಿಯನ್ನು ನಿರ್ಮಿಸಿ, ಮಂದಿರದೊಳಗೆ ಪ್ರತಿಷ್ಠಾಪಿಸಿ, ಕುಟುಂಬದ ಮೂರು ತಲೆಮಾರಿನ ಹಿರಿಯರ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!