ಹೈಕೋರ್ಟ್ ಆದೇಶ : ವಿದ್ಯಾರ್ಥಿಗಳ ಬ್ಯಾಗ್ ಮೇಲೆ ರಾಜಕೀಯ ನಾಯಕರ ಚಿತ್ರ ಮುದ್ರಿಸುವಂತಿಲ್ಲ.!

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ ಬ್ಯಾಗ್ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸುತ್ತದೆ. ಈ ಸಾಮಾಗ್ರಿಗಳ ಮೇಲೆ ಮುಖ್ಯಮಂತ್ರಿ ಅಥವಾ ಯಾವುದೇ ರಾಜಕೀಯ ನಾಯಕರ ಚಿತ್ರಗಳನ್ನು ಮುದ್ರಿಸಬಾರದು ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಟಿ. ಆದಿಕೇಶವಲು ದ್ವಿಸದಸ್ಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಿಗೆ ಮತದಾನದ ಹಕ್ಕು ಇರುವುದಿಲ್ಲ. ಪುಸ್ತಕ, ಬ್ಯಾಗ್ ಎಲ್ಲದರ ಮೇಲೆಯೂ ರಾಜಕಾರಣಿಗಳ ಫೋಟೋ ನೋಡಿ ಮಕ್ಕಳು ಬೇಸರ ಪಟ್ಟುಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ನಾಯಕರ ಚಿತ್ರ ಮುದ್ರಿಸಲು ಸಾರ್ವಜನಿಕರ ಹಣ ಬಳಸುವುದು ಸರಿಯಲ್ಲ, ಸರ್ಕಾರ ಬದಲಾದಾಗೊಮ್ಮೆ ಚಿತ್ರ ಬದಲಿಸುವುದು ಮುಂದುವರಿಯದಿರಲಿ ಎಂದು ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶಾಲಾ ಮಕ್ಕಳ ಬ್ಯಾಗ್ ಮೇಲೆ ಮುದ್ರಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಚಿತ್ರ ತೆಗೆಯದಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಚಿತ್ರ ಬದಲಿಸಿದರೆ ಬೊಕ್ಕಸಕ್ಕೆ 13 ಕೋಟಿ ರೂ. ಹೊರೆಯಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿತ್ತು.