ನಿನ್ನೆ ಬೆಳಿಗ್ಗೆ ಗಣಪತಿ ಕುಳ್ಳಿರಿಸಿದ ಕಟ್ಟೆ ಹಾಗೂ ಅಲಂಕಾರಕ್ಕೆ ತಡ ರಾತ್ರಿ ದುಷ್ಕರ್ಮಿಗಳಿಂದ ಹಾನಿ..!

ನೆಲ್ಯಾಡಿ: ಬೆಳಿಗ್ಗೆಯಷ್ಟೇ ಗಣೇಶೋತ್ಸವ ಅಚರಿಸಲ್ಪಟ್ಟ ಗಣಪತಿ ಕಟ್ಟೆಯನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಹಾನಿಗೊಳಿಸಿರುವ ಘಟನೆ ನೆಲ್ಯಾಡಿ ಸಮೀಪದ ಕಡಬ ತಾಲೂಕಿನ ಉದನೆ ಎಂಬಲ್ಲಿ ನಡೆದಿದೆ. ಸೆ. 10ರ ತಡ ರಾತ್ರಿ ಕಿಡಿಗೇಡಿಗಳು ಗಣಪತಿ ಕಟ್ಟೆಯನ್ನು ಪುಡಿ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಬಾಳೆಗಿಡಗಳನ್ನು ಪುಡಿಗೈಯ್ಯಲಾಗಿದ್ದು ಮೆಟ್ಟಿಲನ್ನು ಹಾನಿಗೊಳಿಸಲಾಗಿದೆ. ಕಲ್ಲು ಎತ್ತಿಹಾಕಿ ಮೆಟ್ಟಿಲು ಹಾನಿಗೊಳಿಸಿರುವುದಾಗಿ ಕಂಡು ಬಂದಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದನೆಯ ಈ ಗಣಪತಿ ಕಟ್ಟೆಯಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಸಾರ್ವಜನಿಕ ಗಣೇಶೋತ್ಸವವನ್ನು ಸ್ಥಳೀಯ ಸಮಿತಿಯೂ ಆಯೋಜಿಸುತ್ತದೆ. ಈ ಬಾರಿ 19 ನೇ ವರ್ಷದ ಗಣೇಶೋತ್ಸವ ಅಲ್ಲಿ ಜರುಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ .ಸರಳವಾಗಿ ಆಚರಿಸಲಾಗಿತ್ತು . ಸಂಜೆಯ ವೇಳೆಗೆ ಗಣಪತಿ ಮೂರ್ತಿಯ ವಿಸರ್ಜನೆಯನ್ನು ನಡೆಸಲಾಗಿತ್ತು.
ಬಳಿಕ ರಾತ್ರಿ ಗಂಟೆ 11 ರ ವರೆಗೂ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಗಣಪತಿ ಕಟ್ಟೆಯ ಬಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.