ಅಕ್ರಮ ಗಣಿಗಾರಿಕೆ : 4 ಟಿಪ್ಪರ್ ವಶ.!

ಬ್ರಹ್ಮಾವರ: ಹೊಸೂರು ಕರ್ಜೆಯ ಶ್ರೀ ನಾಗ ಬ್ರಹ್ಮಲಿಂಗೇಶ್ವರ ಮತ್ತು ದುರ್ಗಾ ಪರಮೇಶ್ವರೀ ದೇವಸ್ಥಾನದ ಬಳಿ ಆಕ್ರಮವಾಗಿ ಬೃಹತ್ ಬಂಡೆಕಲ್ಲುಗಳನ್ನು ತೆಗೆಯುತ್ತಿರುವುದು ಗಮನಕ್ಕೆ ಬಂದ ಕಾರಣ ಮಾ.14ರ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ಮಾಡಿದೆ.
ಕೆಳಬೆಟ್ಟು ಜಯರಾಜ್ ಶೆಟ್ಟಿ ಎಂಬುವವರು ನೀಡಿದ ದೂರಿನ ಮೇರೆಗೆ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ ಗಣಿಗಾರಿಕೆಗೆ ಸಂಬಂಧಪಟ್ಟ 4 ಟಿಪ್ಪರ್, 1 ಹಿಟಾಚಿ ಮತ್ತು ಕಂಪ್ರೇಶರನ್ನು ಮುಟ್ಟು ಗೋಲು ಮಾಡಿದ್ದಾರೆ.
ಭೂ ವಿಜ್ಞಾನಿ ಹಾಜಿರಾ , ಗಣಿ ಇಲಾಖೆಯ ಉಪ ನಿರೀಕ್ಷಕ ಮಹಾದೇವಪ್ಪ , ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ , ಪಿ ಎಸ್ ಐ ಸುಂದರ್, ಕಂದಾಯ ನಿರೀಕ್ಷಕ ಲಕ್ಷ್ಮೀ ನಾರಾಯಣ ಭಟ್, ಗ್ರಾಮ ಲೆಕ್ಕಿಗ ರಾಜಾ ಸಾಬ್ ಹಾಜರಿದ್ದರು.
ಇಂದು ಸಂಕ್ರಮಣ ಪೂಜೆಗೆ ದೇವಸ್ಥಾನಕ್ಕೆ ಬಂದ ಜಯರಾಜ್ ಶೆಟ್ಟಿಯವರು ತಮ್ಮ ಕುಟುಂಬಿಕರ ಜಾಗದಲ್ಲಿ ಆಕ್ರಮವಾಗಿ ಬಂಡೆಕಲ್ಲುಗಳನ್ನು ತೆಗೆಯುತ್ತಿರುವುದನ್ನು ಕಂಡು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿಯವರ ಮೂಲಕ ಇಲಾಖೆಯ ಗಮನಕ್ಕೆ ತಂದ ಕಾರಣ ಅಕ್ರಮಕ್ಕೆ ಕಡಿವಾಣ ಬಿದ್ದಿದೆ.ಇಲ್ಲವಾದಲ್ಲಿ ಅದೆಷ್ಟೋ ಲಾರಿಯಲ್ಲಿ ಬಂಡೆ ಕಲ್ಲುಗಳ ಸಾಗಾಟ ನಿರಾತಂಕವಾಗಿ ಸಾಗುತ್ತಿತ್ತು.
ಸ್ಥಳದಲ್ಲಿ ಹಾಜರಿದ್ದ ವ್ಯಕ್ತಿಯೊಬ್ಬರು ನೀಡಿದ ಹೇಳಿಕೆಯಂತೆ, ಕಾವಡಿಯ ಸುಕುಮಾರ್ ಶೆಟ್ಟಿ ಎನ್ನುವವರು ತನ್ನ ಜಾಗದಲ್ಲಿ ಕಲ್ಲು ತೆಗೆಯಲು ಬರುವಂತೆ ಹೇಳಿದ ಕಾರಣ ಬಂದಿದ್ದೇವೆ ಮತ್ತು ಇಲ್ಲಿ ಹತ್ತಿರದ ಮನೆಯೊಂದರಿಂದ ವಿದ್ಯುತ್ ಕೂಡಾ ಬಳಸುವಂತೆ ಹೇಳಿದ್ದರು. ಆದರೆ ಇಲ್ಲಿ ಈಗ ಈ ಘಟನೆ ನಡೆದ ಬಳಿಕ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಆ ವ್ಯಕ್ತಿ ತಿಳಿಸಿದ್ದಾರೆ.