ಉಡುಪಿ: ನಾಳೆ ಅದಮಾರು ಪೂರ್ಣಪ್ರಜ್ಞ ಸಂಸ್ಥೆಗೆ ಸಿಎಂ ಬೊಮ್ಮಾಯಿ ಭೇಟಿ

ಉಡುಪಿ: ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ, ಅದಮಾರಿನಲ್ಲಿ ನೂತನವಾಗಿ ಆರಂಭವಾಗಲಿರುವ ಪೂರ್ಣಪ್ರಜ್ಞ ಪದವಿ ಕಾಲೇಜು ಇದರ ಕಟ್ಟಡದ ಶಿಲಾನ್ಯಾಸ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಚಯದ ಶಿಲಾನ್ಯಾಸ ಮತ್ತು ಗಣಕ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಯವರು ಬುಧವಾರದಂದು ಭಾಗವಹಿಸಲಿದ್ದಾರೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು ತಿಳಿಸಿದ್ದಾರೆ.
ಅವರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಯವರು, ಬುಧವಾರ 11 ಗಂಟೆಗೆ ಅದಮಾರು ಪಿಯು ಕಾಲೇಜಿನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರೆ, ಉಡುಪಿಯ ನೂತನ ವಿಜ್ಞಾನ ಸಮುಚ್ಚಯದ ಶಿಲಾನ್ಯಾಸ ಮತ್ತು ಗಣಕ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆಯನ್ನು 12. 30 ಗಂಟೆಗೆ ನಡೆಯಲಿದ್ದು ಸಭಾ ಕಾರ್ಯಕ್ರಮವು, ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ.
ಸಭಾಕಾರ್ಯಕ್ರಮದಲ್ಲಿ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಆಶೀರ್ವಚಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನಿಲ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಅದಮಾರು ಮಠ ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಕೆ. ಶ್ರೀಹರಿ, ಪೂರ್ಣಪ್ರಜ್ಞ ಪದವಿ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಹಾಗೂ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರೂ ಡಾ.ಜಿ.ಎಸ್. ಚಂದ್ರಶೇಖರ್, ನ್ಯಾಯವಾದಿ ಹಾಗೂ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿರುತ್ತಾರೆ.