ಕರಾವಳಿ

ಸೈಬರ್ ಕ್ರೈಂ, ಇಂಟರ್ನೆಟ್ ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ- ಶಿಕ್ಷಣ ಸಚಿವರಿಗೆ ಮನವಿ

ಉಡುಪಿ: ಕೋವಿಡ್ ಸಂದರ್ಭದಲ್ಲಿ ಮೊಬೈಲ್ ಮೂಲಕ ಆನ್ ಲೈನ್ ಶಿಕ್ಷಣವನ್ನು ನೀಡುವುದು ಅನಿವಾರ್ಯತೆಯಾಗಿ ಮೂಡಿಬಂದಿತ್ತು. ಈ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳ ಕೈಗೂ ಮೊಬೈಲ್ ನೀಡಬೇಕಾಯಿತು. ಅಪ್ರಾಪ್ತ ಮಕ್ಕಳು ಇಂಟರ್ನೆಟ್ ಬಳಕೆಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇಂಟರ್ನೆಟ್ ಬಳಕೆ ಮಾಡುವ ಸಂದರ್ಭದಲ್ಲಿ ಸೈಬರ್ ಕ್ರೈಂಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಆನ್ ಲೈನ್ ಬ್ಲಾಕ್ ಮೇಲ್ ತಂಡಗಳು ಮಕ್ಕಳಿಂದ ತಪ್ಪು ಕೆಲಸಗಳನ್ನು ಮಾಡಿಸುವ ಅಥವಾ ಆರ್ಥಿಕವಾಗಿ ನಷ್ಟ ಉಂಟುಮಾಡುವ ಸಾಧ್ಯತೆಗಳಿವೆ. ಅತಿಯಾದ ಇಂಟರ್ನೆಟ್ ಉಪಯೋಗದಿಂದ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುವ ಸಾಧ್ಯತೆಗಳ ಜೊತೆಗೆ ಆತ್ಮಹತ್ಯೆ ಸನ್ನಿವೇಶಗಳು ಬರಬಹುದು.

ದೀರ್ಘಾವಧಿಯ ನಂತರ ಈಗ ಶಾಲೆಗಳು ತೆರೆಯಲು ಪ್ರಾರಂಭಿಸಿವೆ. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಶಾಲೆಗಳಲ್ಲಿ ಮೊದಲ ಆದ್ಯತೆಯ ಮೇರೆಗೆ ಸೈಬರ್ ಕ್ರೈಂ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಬೇಕೆಂದು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ (ರಿ.) ವತಿಯಿಂದ ಶಿಕ್ಷಣ ಸಚಿವರಿಗೆ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇವರ ಮೂಲಕ ಮನವಿ ಸಲ್ಲಿಸಲಾಯಿತು.

ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರು ಹಾಗೂ ಸಾಮಾಜಿಕ ಕಾರ್ಯಕರ್ತ ಜೋಸೆಫ್ ಜಿ.ಎಮ್. ರೆಬೆಲ್ಲೋ ಅವರು ಮನವಿಯನ್ನು ಹಸ್ತಾಂತರಿಸಿದರು.

ಈ ವಿಚಾರ ಬಹಳ ಪ್ರಾಮುಖ್ಯತೆ ಪಡೆದಿದೆ. ಶಿಕ್ಷಣ ಸಚಿವರಿಗೆ ಮನವಿಯನ್ನು ಕಳುಹಿಸಿ ಮೊದಲು ಉಡುಪಿ ಜಿಲ್ಲೆಯಲ್ಲಿ ಜಾಗೃತಿ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!