ಹಾಸನಾಂಬ ದೇವಾಲಯದ ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಂದ ಇಂದು ಮದ್ಯಾಹ್ನ 12.15ಕ್ಕೆ ದೇವಿಯ ದರ್ಶನ ಪ್ರಾರಂಭ

ಹಾಸನ ಅ.28 : ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ಇಂದಿನಿಂದ ತೆರೆಯಲಾಗಿದೆ. ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಂದ ಇಂದು ಮದ್ಯಾಹ್ನ 12.15ಕ್ಕೆ ದೇವಿಯ ದರ್ಶನ ಪ್ರಾರಂಭವಾಯಿತು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಶಂಭುನಾಥ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಮಿ, ಜಿಲ್ಲಾ ಸತ್ರ ನ್ಯಾಯಾದೀಶರಾದ ನ್ಯಾಯಾದೀಶರಾದ ನಾ|| ಶಿವಣ್ಣ, ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಮತ್ತಿತರರು ಸರ್ವರಿಗೂ ದೇವಾಲಯದ ಬಾಗಿಲು ತೆರೆಯುವ ಮೂಲಕ ಸಾರ್ವಜನಿಕ ದರ್ಶನಕ್ಕೆ ಚಾಲನೆ ನೀಡಿದರು.
ಸಂಪ್ರಾದಯವಾಗಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬ ದೇವರ ದರ್ಶನಕ್ಕೆ ರಾಜ ವಂಶಸ್ಥ ನಂಜರಾಜ ಅರಸ್ ಬಾಳೆಕಂದು ಕಡಿಯುವ ವಿಧಿವಿಧಾನ ನೆರವೇರಿಸಿದರು. ದೇವಿ ದರ್ಶನದ ನಂತರ ಸಿದ್ದೇಶ್ವರ ಸ್ವಾಮಿಗೆ ಸ್ವಾಮಿಗಳು ಹಾಗೂ ಸಚಿವರು ಅಧಿಕಾರಿಗಳು ಪೂಜೆ ಸಲ್ಲಿಸಿದರು.
ಅಬಕಾರಿ ಇಲಾಖೆ ಸಚಿವ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಶುಭ ಮುಹೂರ್ತದಲ್ಲಿ ಹಾಸನಾಂಬ ಜಾತ್ರೆಗೆ ಚಾಲನೆ ನೀಡಲಾಗಿದೆ, ವರ್ಷಕೊಮ್ಮೆ ಬಾಗಿಲು ತೆಗೆಯುವುದು ಈ ದೇವಸ್ಥಾನದ ವಿಶೇಷ, ವರ್ಷದವರೆಗೂ ಉರಿಯುವ ಜ್ಯೋತಿ ದೇವಿಯ ಪವಾಡ ಈ ಬಾರಿಯ ದೇವಸ್ಥಾನದ ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂತೋಷದ ವಿಚಾರ ಎಂದರು.
ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ, ದರ್ಶನಕ್ಕಾಗಿ ಕಾದು ನಿಲ್ಲುವ ಭಕ್ತಾದಿಗಳಿಗೆ ಟಾರ್ಪಲ್ ಕಮಾನುಗಳನ್ನು ನಿರ್ಮಿಸಿ ನೆರಳಿನ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು
ಕೋರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ದೇವಿಯ ಸಾರ್ವಜನಿಕ ದರ್ಶನಕ್ಕೆ ನಿಷೇದ ಹೇರಲಾಗಿತ್ತು, ಆದರೆ ಈ ಬಾರಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ ಭಕ್ತಾದಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಿ ದರ್ಶನ ಪಡೆಯುವಂತೆ ತಿಳಿಸಿದರು.
ಕಳೆದ ವರ್ಷ ಕೊರೋನಾದಿಂದಾಗಿ ಸಾರ್ವಜನಿಕರಿಗೆ ದರ್ಶನ ಭಾಗ್ಯ ಲಭಿಸಿರಲಿಲ್ಲ. ಈ ಬಾರಿ ಹಾಸನಾಂಬೆ ತಾಯಿಯ ಆಶೀರ್ವಾದದಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಕ್ಕಿದೆ. ಅಲ್ಲದೆ ಕೊರೋನಾವೂ ಕೂಡ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಪೂಜಾ ಕೈಂಕರ್ಯಗಳು ನೆರವೇರಲಿವೆ. ನಂತರ ಸಾರ್ವಜನಿಕರಿಗೆ ದರ್ಶನಕ್ಕ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ1 ರಿಂದ 2 ಗಂಟೆವರೆಗೂ ಪೂಜೆಗಳು ನಡೆಯುವುದರಿಂದ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದರು.
ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಇಡೀ ನಾಡಿನ ಜನರಿಗೆ ಆರೋಗ್ಯ, ಆಯಸ್ಸನ್ನು ದೇವಿ ಕರುಣಿಸಲಿ, ದೇವಿಯ ಎಲ್ಲರಿಗೂ ಒಳಿತು ಮಾಡಲಿ ಎಂದು ಸಚಿವರು ತಿಳಿಸಿದರು.
ರಣಘಟ್ಟ ಏತ ನೀರಾವರಿ ಯೋಜನೆಗೆ ಹಲವು ವರ್ಷಗಳ ಬೇಡಿಕೆ ಇತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 125 ಕೋಟಿ ರೂ. ಹಣ ಮಂಜೂರು ಮಾಡಿದ್ದರು. ಅದರ ಉದ್ಘಾಟನೆ ಕಾರ್ಯಕ್ರಮವು ಅ.30 ರಂದು ನಡೆಯುವ ನಿರೀಕ್ಷೆ ಇದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಕಾನೂನು ಸಂದೀಯ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಮಿ ಅವರು ಹಾಸನಾಂಬೆಯ ದರ್ಶನ ಪಡೆದು ನಂತರ ಸುದ್ದಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಕೊರೋನಾ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ ಈ ಬಾರಿಯ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.
ತಾಯಿಯ ಆಶೀರ್ವಾದಿಂದ ನಾಡಿನ ಒಳಿತಾಗಲಿ ಹಾಸನಾಂಬೆ ತಾಯಿಯ ಆಶೀರ್ವಾದದಿಂದ ಕೊರೋನಾ ಮೂರನೇ ಅಲೆ ರಾಜ್ಯದಲ್ಲಿ ಪರಿಣಾಮಕಾರಿಯಾಗಲಿಲ್ಲ ಎಂದರು.
ಆದ್ದರಿಂದ ಈ ಬಾರಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದು, ಮಳೆ, ಬೆಳೆ, ಉತ್ತಮವಾಗಿದ್ದು, ತಾಯಿಯ ಆಶೀರ್ವಾದಿಂದ ನಾಡು ಸುಭೀಕ್ಷವಾಗಿರಲಿ ಎಂದು ಕಾನೂನು ಸಂದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಶುಭ ಮುಹೂರ್ತದಲ್ಲಿ ಹಾಸನಾಂಬೆಯ ದರ್ಶನಕ್ಕಾಗಿ ಮಹಾದ್ವಾರವನ್ನು ತೆರೆಯಲಾಗಿದೆ ಎಂದರು.
ಪುರುಷನ ಪ್ರತಿಬಿಂಬವಾಗಿರುವಂತಹ ಶಕ್ತಿಮಾತೆ ಹಾಸನದ ದೇವಸ್ಥಾನದಲ್ಲಿ ಮೂರು ರೀತಿ ನೆಲೆಗೊಂಡಿದ್ದಾಳೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಗೆ ಮೂರು ರೂಪ ಇದೆ. ಲಕ್ಷ್ಮಿಯಾಗಿ, ಕಾಳಿಯಾಗಿ, ಸರಸ್ವತಿಯಾಗಿ ನೆಲೆಸಿದ್ದಾಳೆ. ಈ ಪವಿತ್ರ ಸ್ಥಳಕ್ಕೆ ಬರುವವರಿಗೆ ಮೂರೂ ದೇವಿಯರ ದರ್ಶನ ಆಗಲಿದೆ ಎಂದು ತಿಳಿಸಿದರು.
ಜ್ಞಾನಶಕ್ತಿ, ಪರಾಶಕ್ತಿ, ಇಚ್ಛಾಶಕ್ತಿ, ಸಂಕಷ್ಟ ಪರಿಹರಿಸುವ ಕೆಲಸ ತಾಯಿ ಮಾಡಲಿ. ಕೊರೊನಾ 2 ವರ್ಷದಿಂದ ಕಾಡಿದೆ. ತಾಯಿ ಕೃಪೆಯಿಂದ ಪೂರ್ಣಪ್ರಮಾಣದಲ್ಲಿ ಈ ರೋಗ ನಾಡಿನಿಂದ ಹೋಗಲಿ, ಜನರ ಬಾಳು ಸಂತೋಷವಾಗಿರಲಿ. ಆಧ್ಯಾತ್ಮಿಕದ ಜೊತೆ ವಿಜ್ಞಾನವನ್ನೂ ಮೈಗೂಡಿಸಿಕೊಂಡಿದ್ದೇ ಆದರೆ ಬದುಕು ಸುಂದರವಾಗಿರಲಿದೆ. ಶಾಂತಿ, ಸದ್ಭಕ್ತಿಯಿಂದ ದೇವಿಯ ದರ್ಶನ ಮಾಡಿ, ದೇವಿ ಕೃಪೆಗೆ ಪಾತ್ರರಾಗಿ ಎಂದರು.
ಈ ವೇಳೆಯಲ್ಲಿ ಶಾಸಕರಾದ ಪ್ರೀತಂ ಜೆ. ಗೌಡ ,ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ , ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್ ನಂದಿನಿ, ಹಾಸನಾಂಬ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪವಿಭಾಗದಿಕಾರಿ ಬಿ.ಎ ಜಗದೀಶ್, ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಾಲ್ ಹಾಗೂ ಮತ್ತಿತರರು ಹಾಜರಿದ್ದರು.