ಕರಾವಳಿ

ಉಡುಪಿ‌: ಮಿಷನ್ ಆಸ್ಪತ್ರೆಯ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಉದ್ಘಾಟನೆ

ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ರತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್ ‘ಕರುಣಾಲಯ’ ಶುಕ್ರವಾರ ಉದ್ಘಾಟನೆಗೊಂಡಿತು.

ಯುನಿಟ್ ಅನ್ನು ಉದ್ಘಾಟಿಸಿ ಸಿಎಸ್‌ಐ ಕೆಎಸ್‌ಡಿ ಬಿಷಪ್ ರೆ.ಮೋಹನ್ ಮನೋರಾಜ್ ಮಾತನಾಡಿ, ಯುವ ಜನತೆ ಹಾಗೂ ಹಿರಿಯ ನಾಗರಿಕರು ಜೊತೆಯಾಗಿ ಸಾಗಿದಾಗ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು. ಹಿರಿಯ ನಾಗರಿಕರನ್ನು ಮೂಲೆಗುಂಪು ಮಾಡುವ ಬದಲು ಅವರಲ್ಲಿನ ಜ್ಞಾನ, ಅನುಭವವನ್ನು ನಾವು ಪಡೆದುಕೊಳ್ಳಬೇಕು. ಇದರಿಂದ ನಮ್ಮ ಬೆಳವಣಿಗೆ ಸಾಧ್ಯವಾಗಲಿದೆ. ಹಿರಿಯ ನಾಗರಿಕರು ಸಂತೋಷವಾಗಿರುವ ಸ್ಥಳ ಈ ಕರುಣಾಲಯ ಆಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಮನುಷ್ಯ ತನ್ನ ಕೊನೆಯ ಅವಧಿಯಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ಆ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಈ ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್‌ನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಹಿರಿಯ ನಾಗರಿಕರು ಇಲ್ಲಿನ ಅತಿಥಿಗಳೇ ಹೊರತು ರೋಗಿಗಳು ಅಲ್ಲ. ಆದುದರಿಂದ ಅವರಿಗೆ ಬೇಕಾಗಿರುವುದು ಶಾಂತಿ, ನೆಮ್ಮದಿ, ಪ್ರೀತಿ ಹಾಗೂ ಕರುಣೆ. ಅದನ್ನು ನಮ್ಮ ಈ ಯುನಿಟ್‌ನಲ್ಲಿ ನೀಡಲಾಗುವುದು. ಮುಂದೆ ಇಲ್ಲಿ ಹಿರಿಯ ನಾಗರಿಕರ ಡೇಕೇರ್ ಸೆಂಟರ್‌ನ್ನು ಕೂಡ ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಹಿರಿಯ ನಾಗರಿಕರ ಸಂಖ್ಯೆ ವೃದ್ಧಿ:
ಭಾರತದಲ್ಲಿ ಇಂದು ಹಿರಿಯ ನಾಗರಿಕರ ಸಂಖ್ಯೆ ವೃದ್ಧಿಯಾಗುತ್ತಿದೆ. ಸದ್ಯ 14ಕೋಟಿ ಇರುವ ಹಿರಿಯ ನಾಗರಿಕರ ಸಂಖ್ಯೆ ಮುಂದಿನ 10 ವರ್ಷಗಳಲ್ಲಿ 20ಕೋಟಿಗೆ ಏರಿಕೆಯಾಗಲಿದೆ. ಅದೇ ರೀತಿ ಭಾರತದ ಪ್ರಜೆಗಳ ಜೀವಿತಾವಧಿ ಸರಸಾರಿ 70ವರ್ಷಗಳಾಗಿವೆ. ಒಬ್ಬ ವ್ಯಕ್ತಿ ತನ್ನ 70ವರ್ಷಗಳ ಜೀವಿತಾವಧಿಯಲ್ಲಿ 10ವರ್ಷಗಳ ಕಾಲ ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಈ ನಿಟ್ಟಿನಲ್ಲಿ ಹಿರಿಯರ ಸಮಸ್ಯೆ ಸರಿಪಡಿಸಲು ಹಿರಿಯ ನಾಗರಿಕರ ನರ್ಸಿಂಗ್ ಕೇರ್ ಯುನಿಟ್‌ ಸಹಕಾರಿಯಾಗಲಿದೆ ಎಂದು ಡಾ. ಸುಶೀಲ್ ಜತ್ತನ್ನ ಹೇಳಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಕೆಎಸ್‌ಡಿ ಏರಿಯಾ ಚೇಯರ್‌ಮೆನ್ ರೆ.ಐವನ್ ಡಿ ಸೋನ್ಸ್, ನಗರಸಭೆ ಸದಸ್ಯರಾದ ರಮೇಶ್ ಕಾಂಚನ್ ಹಾಗೂ ವಿಜಯ ಪೂಜಾರಿ, ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಶಭೀ ಅಹ್ಮದ್ ಕಾಝಿ ಉಪಸ್ಥಿತರಿದ್ದರು.

ರೆ.ಅಕ್ಷಯ್ ಅಮ್ಮನ್ನ ಪಾರ್ಥಿಸಿದರು. ರೋಹಿ ರತ್ನಾಕರ್ ಸ್ವಾಗತಿಸಿದರು. ದೀನಾ ಪ್ರಭಾವತಿ ವಂದಿಸಿದರು. ಸೋನಿಕ ಅವ್ಮುನ್ನ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!