ಕಾಪು: ಅಂಬುಲೆನ್ಸ್ ಡಿಕ್ಕಿ ಹೊಡೆದು ವಾಕಿಂಗ್ ಹೋಗಿದ್ದ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಕಾಪು ನ.6: ಅಂಬುಲೆನ್ಸ್ ಡಿಕ್ಕಿ ಹೊಡೆದು ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಹೆ 66ರಲ್ಲಿ ಕಾಪುವಿನ ಕೋತಲ್ ಕಟ್ಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಉಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ ಗೋವಿಂದ ಪೂಜಾರಿ (65) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಗೋವಿಂದ ಪೂಜಾರಿಯವರು ರಸ್ತೆ ದಾಟಲು ನಿಂತಿದ್ದ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಅಂಬುಲೆನ್ಸ್ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಗೋವಿಂದ ಪೂಜಾರಿ ಅವರನ್ನು ತಕ್ಷಣ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಅಪಘಾತದ ತೀವ್ರತೆಗೆ ಅಂಬುಲೆನ್ಸ್ ನ ಮುಂಭಾಗ ಜಖಂ ಆಗಿದೆ. ಅಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಮತ್ತೊಂದು ಅಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಅಂಬುಲೆನ್ಸ್ ಚಾಲಕ ಮಣಿಯವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.