ಮಂಗಳೂರು | ಇಳಂತಿಲ ಗ್ರಾಮದಲ್ಲಿ ಐದು ಗ್ರೇನೆಡ್ ಸ್ಫೋಟಕ ಪತ್ತೆ

ಮಂಗಳೂರು: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ಐದು ಗ್ರೇನೆಡ್ ರೀತಿಯ ಸ್ಫೋಟಕಗಳು ಪತ್ತೆಯಾಗಿವೆ.ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮ ನಿವಾಸಿ ನಿವೃತ್ತ ಯೋಧರಾಗಿರುವ ಜಯಕುಮಾರ್ ಪೂಜಾರಿಯವರ ಮನೆಯ ರಸ್ತೆ ಪಕ್ಕದಲ್ಲೇ ಗ್ರೆನೇಡ್ ಪತ್ತೆಯಾಗಿದೆ. ಈ ಬಗ್ಗೆ ಜಯಕುಮಾರ್ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ನಿವೃತ್ತ ಸೇನಾಧಿಕಾರಿ ಜಯಕುಮಾರ್ ಪೂಜಾರಿ ಅವರು ಉಪ್ಪಿನಂಗಡಿಯಿಂದ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗ್ರೆನೇಡ್‌ಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಗ್ರೆನೇಡ್ ಹಾಗೂ ಉಳಿದ ನಾಲ್ಕು ಗ್ರೆನೇಡ್‌ಗಳು ನೆಲದ ಮೇಲೆ ಬಿದ್ದಿದ್ದವು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅವುಗಳನ್ನು ಸುರಕ್ಷಿತವಾಗಿ ತಮ್ಮ ನಿವಾಸಕ್ಕೆ ತೆಗೆದುಕೊಂಡು ಹೋದ ಜಯಕುಮಾರ್ ಪೂಜಾರಿ ಅವರು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ದಕ್ಷಿಣ ಕನ್ನಡ ಪೊಲೀಸರು ಗ್ರೆನೇಡ್ ವಶಪಡಿಸಿಕೊಂಡಿದ್ದಾರೆ. ಗ್ರೆನೇಡ್‌ಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.