ಕರಾವಳಿ

ಉಡುಪಿ: ಇಂದಿನಿಂದ ಅಂಗನವಾಡಿಗಳಲ್ಲಿ ಕೇಳಲಿದೆ ಚಿಣ್ಣರ ಕಲರವ..!!

ಕೋವಿಡ್ 19 ಕಾರಣದಿಂದ ಸುಮಾರು 1.5 ವರ್ಷದಿಂದ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳ ನಗುವಿನ ಕಲರವ ಇಂದಿನಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳ ದ ಒಟ್ಟು 4 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವ್ಯಾಪ್ತಿಯ 1191 ಅಂಗನವಾಡಿಗಳನ್ನು ಈಗಾಗಲೇ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಕೇಂದ್ರಗಳ ಒಳ ಮತ್ತು ಹೊರ ಆವರಣಗಳನ್ನು,ಕಿಟಕಿ,ಬಾಗಿಲು ,ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ, ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿ,ಆಟಿಕೆ ಸಾಮಾನುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದ್ದು, ಪೌಷ್ಠಿಕ ಆಹಾರ ತಯಾರಿಸುವ ಎಲ್ಲಾ ಪಾತ್ರೆ/ಲೋಟ/ ಕುಕ್ಕರ್ ಗಳನ್ನು ಸ್ವಚ್ಛಗೊಳಿಸಲಾಗಿದೆ.

ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ್ದು, ಎರಡೂ ಲಸಿಕೆ ಪಡೆದಿರುವ ಕುರಿತಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪರಿಶೀಲಿಸಲಿದ್ದು, 72 ಗಂಟೆಗಳ ಮುಂಚೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅಂಗನವಾಡಿಯಲ್ಲಿ ಮಕ್ಕಳನ್ನು 1 ಮೀ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 1 ಮೀ ಅಂತರದಲ್ಲಿ ಮಕ್ಕಳನ್ನು ಕೂರಿಸುವಾಗ, ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕೇಂದ್ರದಲ್ಲಿ ಸ್ಥಳದ ಕೊರತೆಯಾದಲ್ಲಿ , ಪ್ರತಿದಿನ ಎಷ್ಟು ಮಕ್ಕಳು ಬರಬೇಕು ಎಂಬುದನ್ನು ತೀರ್ಮಾನಿಸಲು ನಿರ್ಧರಿಸಿದ್ದು, ಯಾವ ಮಕ್ಕಳು ಬರಬೇಕು ಎಂಬುದರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಬೆಳಿಗ್ಗೆ 10 ರಿಂದ 12 ರ ವರೆಗೆ ಮಾತ್ರ ಅಂಗನವಾಡಿಯನ್ನು ತೆರೆಯಲು ನಿರ್ಧರಿಸಿದ್ದು, ಮುಂದಿನ ಸೂಚನೆವರೆಗೆ ಪೂರಕ ಪೌಷ್ಠಿಕ ಆಹಾರವನ್ನು /ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುವುದು. 15 ದಿನಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೌಷ್ಠಿಕ ಆಹಾರವನ್ನು ಕೇಂದ್ರದಲ್ಲಿಯೇ ನೀಡಲಾಗುವುದು. ಕೇಂದ್ರದಲ್ಲಿ ಆಹಾರ ತಯಾರಿಸುವವರು ಮುಖಗವಸು, ಹೆಡ್ ಕ್ಯಾಪ್ ಮತ್ತು ಏಪ್ರನ್ ಧರಿಸುವಂತೆ ಸೂಚನೆ ನೀಡಲಾಗಿದೆ.

ಅಂಗನವಾಡಿ ಆರಂಭದ ದಿನದಂದು ಕೆಂದ್ರಗಳಲ್ಲಿ ಹಬ್ಬದ ವಾತಾವರಣ ಇರುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದ್ದು, ಕೇಂದ್ರಗಳನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ಬಲೂನುಗಳಿಂದ ಅಲಂಕರಿಸುವುದು,ಪ್ರತಿ ಮಗುವನ್ನು ಗುಲಾಬಿ ಹೂ ನೀಡಿ ಸ್ವಾಗತಿಸುವುದು,ಪ್ರಾರಂಭದ ದಿನ ಸಿಹಿ ತಿನಿಸು ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ.

ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆಯಂತೆ , ಜಿಲ್ಲೆಯಲ್ಲಿ ನವೆಂಬರ್ 8 ರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥಿತ ರೀತಿಯಲ್ಲಿ ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಎಲ್ಲಾ ಅಂಗನವಾಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳಿಗೆ ಸೂಚನೆ ನೀಡಲಾಗಿದೆ.

ಕೇಂದ್ರಕ್ಕೆ ಬರುವ ಪ್ರತೀ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆಗಳನ್ನು ನೀಡಿದ್ದು, ಎಲ್ಲಾ ಅಂಗನವಾಡಿಗಳಲ್ಲಿ ಕೋವಿಡ್ ಸುರಕ್ಷಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!