28,000 ಆಮೆಗಳನ್ನು ಸಂರಕ್ಷಿಸಿದ ಸಾಧಕಿ ಅರುಣಿಮ ಸಿಂಗ್

ಮುಂಬೈ: ಆಮೆಗಳು ಕಣ್ಣಿಗೆ ಬಿದ್ದ ಕೂಡಲೆ ಅವುಗಳನ್ನು ಹೆಚ್ಚಿನ ಮಂದಿ ಕಲ್ಲು ಹೊಡೆದು ಸಾಯಿಸುತ್ತಾರೆ. ಕೆಲವರು ಇದನ್ನು ಆಹಾರವಾಗಿ ಬಳಸುತ್ತಾರೆ. ಇಂತರ ವಾತಾವರಣದಲ್ಲಿ ಮಹಿಳೆಯೊಬ್ಬರು ಕಳೆದ ಎಂಟು ವರ್ಷದಲ್ಲಿ 28,000 ಆಮೆಗಳನ್ನು ಸಂರಕ್ಷಿಸಿ ಮತ್ತೆ ನದಿಗೆ ಬಿಟ್ಟಿದ್ದಾರೆ. ಇವರ ಸಾಧನೆಗೆ ಹಲವು ಪ್ರತಿಷ್ಟಿತ ಪ್ರಶಸ್ತಿ ದೊರೆತಿದೆ.
ಮೂಲತ: ಲಕ್ನೋ ನಿವಾಸಿಯಾಗಿರುವ ಅರುಣಿಮ ಸಿಂಗ್ ಅವರಿಗೆ ಚಿಕ್ಕಂದಿನಿಂದಲೇ ಪರಿಸರ ಕಾಳಜಿಯ ಬಗ್ಗೆ ವಿಶೇಷ ಆಸಕ್ತಿ ಬೆಳೆದಿತ್ತು. ಅಜ್ಜನ ಜತೆ ನದಿ ದಂಡೆಗೆ ಹೋಗುತ್ತಿದ್ದ ವೇಳೆ ಅಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಇದು ಮುಂದಿನ ದಿನಗಳಲ್ಲಿ ಅವರಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೆ ಕಾರಣವಾಯಿತು.
ತಮ್ಮದೇ ಆದ ಸ್ವಯಂ ಸೇವಾ ಸಂಘ ಕಟ್ಟಿಕೊಂಡಿರುವ ಅರುಣಿಮ ಸಿಂಗ್ , ಉತ್ತರ ಪ್ರದೇಶ ಸರ್ಕಾರದ ನೆರವಿನಿಂದ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆ ಸಂಕಲ್ಪ ಬದ್ಧರಾಗಿದ್ದಾರೆ.