ಪವರ್ ಸ್ಟಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಘೋಷಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ಪುನೀತ ನಮನ ಕಾರ್ಯಕ್ರಮದಲ್ಲಿ ಸಿಎಂ ಈ ಘೋಷಣೆ ಮಾಡಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಸ್ಮಾರಕದಂತೆ ಪುನೀತ್ ಅವರಿಗೂ ಸ್ಮಾರಕ ನಿರ್ಮಿಸಲಾಗುವುದು ಎಂದರು.
ಅಪ್ಪುವಿನ ಪಾರ್ಥೀವ ಶರೀರದ ದರ್ಶನ ಸಂದರ್ಭದಲ್ಲಿ ನನ್ನ ಮುತ್ತು ಕೊಟ್ಟ ಬಗ್ಗೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಅಂದುಕೊಂಡಿದ್ದರು. ಆದರೆ ಆ ಮುತ್ತನ್ನು ಕನ್ನಡಿಗರೆಲ್ಲರ ಪರವಾಗಿ ನೀಡಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ನಟ ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋದಲ್ಲಿನ ಪುತ್ಥಳಿ ಸೇರಿದಂತೆ ಅಲ್ಲಿನ ಸಮಾಧಿ ನಿರ್ಮಾಣ ಸೇರಿದಂತೆ ವಿವಿಧ ಕೆಲಸವನ್ನು ಸರ್ಕಾರವೇ ಮುಂದೆ ನಿಂತು ಮಾಡಲಿದೆ. ಪುನೀತ್ ಸಮಾಧಿ ಸ್ಥಳ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ಸಹಕಾರವನ್ನು ನೀಡಲಾಗುತ್ತದೆ ಎಂದರು.
ಪುನೀತ್ ರಾಜ್ ಕುಮಾರ್ ಅವರಿಗೆ ನಾಡಿನ ಜನರ ಅಭಿಲಾಷೆಯಂತೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ. ಇದಷ್ಟೇ ಅಲ್ಲದೇ ಕೇಂದ್ರ ಸರ್ಕಾರದಿಂದಲೂ ಪ್ರಶಸ್ತಿ ನೀಡೋದಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಅಕ್ಟೋಬರ್ 29ರಂದು ಹೃದಯಸ್ತಂಭನದಿಂದ ನಿಧನರಾದ ಸ್ಯಾಂಡಲ್ವುಡ್‌ನ ಯುವರತ್ನ ಪುನೀತ್ ರಾಜಕುಮಾರ್ ಅವರಿಗೆ ಪುನೀತ ನಮನ ಕಾರ್ಯಕ್ರಮ ನಡೆಯುತ್ತಿದ್ದು, ಸಿನಿಮಾ ಹಾಗೂ ರಾಜಕೀಯ ರಂಗದ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಾರೆ.