ಉಡುಪಿ: ಕೊನೆಗೂ ನಗರಕ್ಕೆ ಬಂತು ಅತ್ಯಾಧುನಿಕ ಸಿಗ್ನಲ್ ಲೈಟ್ಸ್ ಸಿಸ್ಟಮ್ – 12 ಕಡೆ ಅಳವಡಿಕೆ

ಉಡುಪಿ : ನಗರದಲ್ಲಿ ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ರಸ್ತೆಗಳಲ್ಲಿ ಸರಿಯಾದ ಸಿಗ್ನಲ್‌ಗಳಿಲ್ಲದೆ ನಗರದ ಜನರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ. ವಾರಾಂತ್ಯದಲ್ಲಿ ವಾಹನ ಚಾಲಕರು ಗಂಟೆಗಟ್ಟಲೆ ನಿಂತು ಕಾಯಬೇಕು. ಅವ್ಯವಸ್ಥಿತ ಟ್ರಾಫಿಕ್ ಓಡಾಟಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.
ಸುಗಮ ಸಂಚಾರಕ್ಕೆ ಮಣಿಪಾಲದ ಟೈಗರ್ ಸರ್ಕಲ್ ನಲ್ಲಿ ಅತ್ಯಾಧುನಿಕ ಸಿಗ್ನಲ್ ಲೈಟ್ ಸ್ಥಾಪಿಸಲಾಗಿದ್ದು, ಪ್ರಾಯೋಗಿಕವಾದ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ಪೂರ್ಣ ವಾಗಿ ಕಾರ್ಯಾಚರಿಸಲಿದೆ.ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಸಿಗ್ನಲ್ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಹಲವಾರು ಸಮಯದ ಬೇಡಿಕೆಯೂ ಹೌದು. ಹೀಗಾಗಿ ನಗರದ ಒಟ್ಟು 12 ಪ್ರಮುಖ ಜಂಕ್ಷನ್ ಗಳಲ್ಲಿ ಸಿಗ್ನಲ್ ಲೈಟ್ಸ್ ಅಳವಡಿಸಲಾಗುತ್ತದೆ.
ಎಕನಾಮಿಕ್ ಬಿಡ್ ನಂತೆ ಏಜೆನ್ಸಿ ಕಡೆಯವರು ಒಂದು ಜಂಕ್ಷನ್ ನಿಂದ 20 ಸಾವಿರ ರೂಪಾಯಿ ಹಣವನ್ನು ನಗರಸಭೆಗೆ ಪ್ರತೀ ತಿಂಗಳು ಪಾವತಿಸಬೇಕು. ಅದರಂತೆ ವರ್ಷಕ್ಕೆ ಒಂದು ಜಂಕ್ಷನ್‌ನಿಂದ 2.40 ಲಕ್ಷರೂ. ಸೇರಿದಂತೆ ಒಟ್ಟು 12 ಜಂಕ್ಷನ್‌ಗಳಿಂದ 28.80 ಲಕ್ಷ ರೂ. ಹಣ ನಗರಸಭೆಗೆ ನೀಡಬೇಕಾಗುತ್ತದೆ. ಸಿಗ್ನಲ್ ಲೈಟ್ ನಿರ್ವಹಣೆಯಲ್ಲಿ ಲೋಪ, ದೂರು ಕೇಳಿ ಬಂದಲ್ಲಿ ಏಜೆನ್ಸಿ ಗುತ್ತಿಗೆ ರದ್ದುಪಡಿಸಬಹುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟೇ ಅಲ್ಲದೇ, ಸಿಗ್ನಲ್ ಕಂಬಗಳಲ್ಲಿ ಟಿವಿ ಡಿಸ್‌ಪ್ಲೇ ಅಳವಡಿಸಲಾಗುತ್ತದೆ. ಇದರಲ್ಲಿ ವಾಹನಗಳು ನಿಂತಾಗ ರಸ್ತೆ ಸುರಕ್ಷತೆ ಆರೋಗ್ಯ ಸಂಬಂಧಿ ಜಾಗೃತಿ ಸಹಿತ ಕಮರ್ಷಿಯಲ್ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ. ಏಜೆನ್ಸಿಯವರು ಈ ಯೋಜನೆಗಾಗಿ ತಾವು ಹೂಡಿರುವ ಹಣ ಹಾಗೂ ನಿರ್ವಹಣೆ ಹಣ ವನ್ನು ಈ ಜಾಹೀರಾತಿನ ಮೂಲಕ ಸಂಗ್ರಹಿಸಲಿದ್ದಾರೆ.
ಮಣಿಪಾಲ ಜಂಕ್ಷನ್ ಸೇರಿದಂತೆ ಒಟ್ಟು 12 ಕಡೆ ಸಿಗ್ನಲ್ ಲೈಟ್ಸ್ ಅಳವಡಿಕೆ:
ಉಡುಪಿಯ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಲ್ಸಂಕ ಜಂಕ್ಷನ್, ಹಳೆ ಡಯಾನಾ ಸರ್ಕಲ್, ಜೋಡುಕಟ್ಟೆ ಜಂಕ್ಷನ್, ಬನ್ನಂಜೆ ನಾರಾಯಣ ಗುರು ಮಂದಿರದ ಬಳಿ ಇರುವ ಜಂಕ್ಷನ್, ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್, ಅಂಬಾಗಿಲು ಜಂಕ್ಷನ್, ಟೈಗರ್ ಸರ್ಕಲ್, ಕುಂಜಿಬೆಟ್ಟುವಿನ ಎಮ್ ಜಿ ಎಮ್ ಕಾಲೇಜು ಎದುರಿನ ಜಂಕ್ಷನ್ ಮತ್ತು ಎಂಐಟಿ ಜಂಕ್ಷನ್.
ರಿಮೋಟ್ಲಿಮ್ಯಾನೇಜ್ಡ್ ಇಂಟಿಗ್ರೇಟೆಡ್ ಟ್ರಾಫಿಕ್ ಅಪ್ ಡೇಟ್ ಡಿಸ್‌ಪ್ಲೇ ಸಿಸ್ಟಮ್ ಎಂಬ ತಾಂತ್ರಿಕ ವ್ಯವಸ್ಥೆ ಇದಾಗಿದ್ದು ಮೊದಲ ಬಾರಿಗೆ ನಗರದಲ್ಲಿ ಅನುಷ್ಠಾನ ಗೊಳ್ಳುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತ, ಉಡುಪಿ ನಗರಸಭೆ, ಪೋಲಿಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಶಾಸಕರ ಸಭೆ ಸೇರಿ ಅಂತಿಮ ಗೊಳಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಿಗ್ನಲ್ ಲೈಟ್ಸ್ ಅಳವಡಿಸಲಾಗುತ್ತದೆ.