ಉಡುಪಿ ಪರ್ಯಾಯ – ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಉಡುಪಿ ನಗರಸಭಾ ಅಧ್ಯಕ್ಷರ ನಿಯೋಗದೊಂದಿಗೆ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿಯವರ ಭೇಟಿ

2022ನೇ ಜನವರಿ ತಿಂಗಳಲ್ಲಿ ಉಡುಪಿಯಲ್ಲಿ ವಿಶ್ವ ಪ್ರಸಿದ್ಧ ಉಡುಪಿ ಪರ್ಯಾಯ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಉಡುಪಿ ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಉಡುಪಿ ನಗರಸಭೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಉಡುಪಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರುಗಳ ನಿಯೋಗದೊಂದಿಗೆ ಇಂದು ದಿನಾಂಕ 18-11-2021 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಯವರು ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಅನುದಾನ ಬಿಡುಗಡೆ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಉಡುಪಿ ನಗರದ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಹಾಗೂ ಪರ್ಯಾಯ ಮಹೋತ್ಸವಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಶ್ರೀ ಕೃಷ್ಣ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು.
ಉಡುಪಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.