ಕೆ.ಎಂ.ಸಿ ಮಣಿಪಾಲ: ವಾಕ್ ಇನ್ ಲ್ಯಾಬ್ ಪ್ರಯೋಗಾಲಯ, ಮಾದರಿ ಸಂಗ್ರಹ ಸೇವೆಗಳಿಗೆ ಚಾಲನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಸಾರ್ವಜನಿಕರಿಗೆ ಬಹು ಉಪಯುಕ್ತವಾದ ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಮತ್ತು ಮಾದರಿ ಸಂಗ್ರಹ ಸೇವೆಗಳಿಗೆ ನಿನ್ನೆ ಚಾಲನೆ ನೀಡಲಾಯಿತು.
ಈ ನವೀನ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ನಾಗಭೂಷಣ್ ಉಡುಪ ಎಚ್ ಅವರು, ಈ ಹೊಸ ಸೇವೆಯು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹುವಾಗಿ ಪ್ರಯೋಜನವಾಗಲಿದೆ. ಇಂತಹ ಜನಮುಖಿ ಸೇವೆಗಳನ್ನು ನೀಡುವಲ್ಲಿ ಮಣಿಪಾಲ ಸಂಸ್ಥೆಯು ಯಾವಾಗಲು ಮುಂಚೂಣಿಯಲ್ಲಿದೆ ಎಂದರು.
ಸ್ಥಳೀಯ ನಗರಸಭೆ ಸದಸ್ಯರಾದ ಮಂಜುನಾಥ್ ಅವರು ಹೊಸ ಸೇವೆ ಆರಂಭಿಸಿದ್ದಕ್ಕೆ ಅಭಿನಂದಿಸಿ ಶುಭ ಕೋರಿದರು. ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಅವರು, ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯವು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಸೇವೆಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿ (ಎನ್.ಎ.ಬಿ.ಎಲ್) ಯಿಂದ ಮಾನ್ಯತೆ ಪಡೆದಿದೆ. ಇದು ಭಾರತದ ಗುಣಮಟ್ಟ ಮಂಡಳಿಯ ಒಂದು ಘಟಕವಾಗಿದೆ.
ಈಗ ಎಲ್ಲಾ ರೀತಿಯ ಪರೀಕ್ಷೆಗಳಿಗೆ ಮಾದರಿಗಳನ್ನು ಆಸ್ಪತ್ರೆಯ ಒಳಗೆ ಪ್ರವೇಶಿಸದೆ ನೀಡಬಹುದು ಮತ್ತು ಇದು ಅನುಕೂಲಕರವಾಗಿ ಮಣಿಪಾಲ ಬಸ್ ನಿಲ್ದಾಣದ ಸಮೀಪದಲ್ಲಿಯೇ ಇದೆ ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು, ಇನ್ನು ಮುಂದೆ ಲ್ಯಾಬ್ ಸೇವೆಗಳಿಗೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ ಮತ್ತು ಪರೀಕ್ಷಾ ವರದಿಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದು. ಸಾಮಾನ್ಯ ಲ್ಯಾಬ್ ಪರೀಕ್ಷೆಗಳಿಗೆ ವೈದ್ಯರ ಚೀಟಿಯ ಅಗತ್ಯವಿಲ್ಲ ಮತ್ತು ಹೊರಗಿನ ವೈದ್ಯರು ಶಿಫಾರಸು ಮಾಡಿದ ಪರೀಕ್ಷೆಗಳನ್ನು ಸಹ ಮಾಡಲಾಗುವುದು ಎಂದರು.
ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ ಮುತ್ತಣ್ಣ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಡೀನ್ ಡಾ. ಅರುಣ್ ಮಯ್ಯ, ಕೆಎಂಸಿ ಮಣಿಪಾಲದ ಸಹ ಡೀನ್ ಡಾ. ಕೃಷ್ಣಾನಂದ ಪ್ರಭು, ಉಪ ವ್ಯವಸ್ಥಾಪಕ ಡಾ. ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕರಾದ ಡಾ. ರವೀಂದ್ರ ಮರಡಿ, ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ವರಶ್ರೀ ಬಿ ಎಸ್, ಲ್ಯಾಬ್ ಟೆಕ್ನಾಲಾಜಿ ಮುಖ್ಯಸ್ಥರಾದ ಡಾ. ಸರಿತಾ ಕಾಮತ್ ಉಪಸ್ಥಿತರಿದ್ದರು.
ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಸೌಲಭ್ಯವು ನೆಲಮಹಡಿ, ಬಯೋಕೆಮಿಸ್ಟ್ರಿ ವಿಭಾಗ, ಟೈಗರ್ ಸರ್ಕಲ್, ಮಣಿಪಾಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಕಾರ್ಯಾಚರಿಸಲಿದೆ. ಹೆಚ್ಚಿನ ಮಾಹಿತಿ ಮತ್ತು ವಿಚಾರಣೆಗಾಗಿ ದೂರವಾಣಿ ಸಂಖ್ಯೆ 0820- 2923308 ಸಂಪರ್ಕಿಸಬಹುದು.