ಗರೋಡಿ ಅರ್ಚಕರು ಹಾಗೂ ದರ್ಶನ ಪೂಜಾರಿಯವರಿಗೆ ಸರ್ಕಾರ ವಿಶೇಷ ಸಹಕಾರ ಪ್ಯಾಕೇಜ್ ನೀಡಬೇಕು: ಪ್ರವೀಣ್ ಎಂ ಪೂಜಾರಿ

ಕರ್ನಾಟಕ ಸರಕಾರ ದೇವಾಲಯದ ಅರ್ಚಕರಿಗೆ ಹಾಗೂ ಇತರ ಕೆಲವು ವಿಶೇಷ ಪ್ಯಾಕೇಜ್ ಘೋಷಿಸಿದೆ.ಇದು ಅಭಿನಂದನಾರ್ಹ ನಿರ್ಧಾರ.
ಅವಿಭಜಿತ ದಕ್ಷಿಣ ಕನ್ನಡ ಉಡುಪಿಯಾದ್ಯಂತ ಕೋಟಿ ಚೆನ್ನಯರ ಹಾಗೂ ಪರಿವಾರ ಶಕ್ತಿ ಆರಾಧನೆಯ ಪುಣ್ಯಸ್ಥಳವೆನಿಸಿದ ಗರೋಡಿ ಅರ್ಚಕರಿಗೆ ,ಬೈದೇರುಗಳ ದರ್ಶನ ಪೂಜಾರಿಯವರಿಗೆ ಯಾವುದೇ ಸಹಕಾರವನ್ನು ಪ್ರಕಟಿಸದಿರುದನ್ನು ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಖಂಡಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿಯಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗರೋಡಿಯ ಬಗೆಗೆ ಸ್ಪಷ್ಟ ತಿಳುವಳಿಕೆ ಇದೆ.ಕಳೆದ ಬಾರಿಯೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಈ ಕುರಿತಂತೆ ಮನವಿ ಮಾಡಿದ್ದರೂ ಸರ್ಕಾರ ಯಾವುದೇ ಸವಲತ್ತನ್ನು ನೀಡಲಿಲ್ಲ.ಇಂತಹ ತಾರತಮ್ಯ ನೀತಿ ಸಲ್ಲದು.ಸುಮಾರು 230 ಕ್ಕಿಂತಲೂ ಹೆಚ್ಚು ಗರೋಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಅರ್ಚಕರಾಗಲಿ,ಬೈದೇರುಗಳ ದರ್ಶನ ಪೂಜಾರಿಯವರಾಗಲಿ ಸಾಂಪ್ರದಾಯಿಕವಾದ ಕೆಲವೊಂದು ಕಟ್ಟುಪಾಡುಗಳಿಗೆ ಒಳಪಟ್ಟು ಕೃಷಿ, ಇನ್ನಿತರ ಕೆಲವೊಂದು ಸೀಮಿತ ವೃತ್ತಿಯನ್ನು ಮಾತ್ರ ಮಾಡಬಹುದಾಗಿದೆ.ಇವರಲ್ಲಿ ಬಹುತೇಕ ಮಂದಿ ಮೂಲತಃ ಬಡತನ ಹಾಗೂ ವಯೋಸಹಜ ಆರೋಗ್ಯ ಇನ್ನಿತರ ಸಮಸ್ಯೆಗಳಲ್ಲಿದ್ದಾರೆ.ಕೋರೋನಾ ಸಮಸ್ಯೆಯಿಂದ ಕಳೆದ ವರ್ಷದಿಂದ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ,ನೇಮೋತ್ಸವ,ಇನ್ನಿತರ ಸೇವಾ ಕಾರ್ಯವೆಲ್ಲವೂ ಸಾಂಕೇತಿಕವಾಗಿ ನಡೆಯುತ್ತಿದೆ ವಿನಹ ಸಮಸ್ತ ಗರೋಡಿಗಳು ಯಾವುದೇ ಅರ್ಥಿಕ ಮೂಲಗಳಿಲ್ಲದ ಸ್ಥಿತಿಯಲ್ಲಿದೆ.ಆದರೂ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸುತ್ತಿರುವುದು ಖೇಧಕರ. ಪರಮಪೂಜ್ಯ ಕೋಟಿಚೆನ್ನಯರ ಗರೋಡಿಯ ಅಗಾಧ ಮಹಿಮೆ ಮತ್ತು ಹಿನ್ನೆಲೆಯ ಬಗೆಗೆ ತಿಳುವಳಿಕೆಯುಳ್ಳ ಗೌರವಾನ್ವಿತ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕರಾವಳಿಯ ಶಾಸಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಗರೋಡಿ ಪೂಪೂಜನೆಯವರಿಗೆ ಮತ್ತು ಬೈದೇರುಗಳ ದರ್ಶನ ಪೂಜಾರಿಯವರಿಗೆ ಈ ಕೋವಿಡ್ ಸಂದರ್ಭದಲ್ಲಿ ಅರ್ಥಿಕ ಸಹಕಾರ ನೀಡುವಲ್ಲಿ ಪ್ರಯತ್ನಿಸುವಂತೆ ವಿನಂತಿಸುತ್ತೇವೆ.
ಪದೇ ಪದೇ ನಿರ್ಲಕ್ಷ್ಯ ಧೋರಣೆಯಿಂದ ಜನಪ್ರತಿನಿಧಿಗಳಿಗೆ ಮುಂದಿನ ದಿನಗಳಲ್ಲಿ ಹಿನ್ನಡೆ ಆಗುವ ಬದಲು ಇಂದಿನ ತುರ್ತು ಅಗತ್ಯದ ಸಂದರ್ಭದಲ್ಲಿ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಪ್ರವೀಣ್ ಎಂ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.