ಕರಾವಳಿ

ಉಡುಪಿ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಸ್ಥಳೀಯರ “ಆಕ್ರಮಣ”!: ದಂಧೆಕೋರರು ಪರಾರಿ

ಬ್ರಹ್ಮಾವರ: ಜಿಲ್ಲೆಯಲ್ಲಿ ಅಕ್ರಮ‌ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಜನರೇ ಈ ಅಕ್ರಮಗಳನ್ನು ತಡೆಯುತ್ತಿರುವ ಘಟನೆ ಅಲ್ಲಲ್ಲಿ ನಡೆಯುತ್ತಿದೆ. ಉಡುಪಿ ತಾಲೂಕಿನ ಸುರ್ಕುದ್ರುವಿನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಇಲ್ಲಿನ ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರೇ ತಡೆದಿದ್ದಾರೆ. ಮಾತ್ರವಲ್ಲ, ಅಕ್ರಮ ಮರಳುಗಾರಿಕೆ ನಡೆಸಲು ಬಳಸುತ್ತಿದ್ದ ದೋಣಿಗಳನ್ನೂ ವಶಕ್ಕೆ ಪಡೆದಿದ್ದಾರೆ.

ಮುಂಜಾವ 5 ಗಂಟೆ ಸುಮಾರಿಗೆ ಈ ಪರಿಸರದಲ್ಲಿ ಕೆಲವು ದೋಣಿಗಳಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ. ತಕ್ಷಣ ಇಲ್ಲಿನ ಸ್ಥಳೀಯ ಸಮಿತಿಯ 10 ಮಂದಿಯ ತಂಡ 4 ದೋಣಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ 2 ದೋಣಿಯಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿ ಮರಳುಗಾರಿಕೆ ನಡೆಸಲು ಅನುಮತಿ‌ ಇಲ್ಲ. ಈ ಹಿಂದೆಯೂ ಇಲ್ಲಿ ಅಕ್ರಮ ನಡೆಯುತ್ತಿತ್ತು. ಬಳಿಕ ಅನಧಿಕೃತ ಮರಳುಗಾರಿಕೆಗೆ ಅನುಮತಿ ನೀಡದಂತೆ ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಈ ಭಾಗದಲ್ಲಿ ಮರಳುಗಾರಿಕೆ ನಡೆಸಬಾರದು ಎಂದು ಸೂಚನೆ ನೀಡಿದ್ದರು. ಆದರೂ ಇಲ್ಲಿ ಅನಧಿಕೃತವಾಗಿ ಮರಳು ದಂಧೆ ನಡೆಯುತ್ತಲೇ ಇದೆ.ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!