ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕಕ್ಕೆ ದಾಳಿ

ಮೈಸೂರು,: ಪ್ರತಿಷ್ಠಿತ ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದ ಮೈಸೂರಿನ ಹೊರವಲಯದ ಹೊಸಹುಂಡಿ ಗ್ರಾಮದ ಸಮೀಪದ ಘಟಕಕ್ಕೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ ಮೊದಲು ಈ ಅಕ್ರಮ ದಂಧೆ ಬಗ್ಗೆ ಮಾಹಿತಿ ತಿಳಿದ ಹ್ಯೂಮನ್ ರೈಟ್ಸ್ ಸಂಘಟನೆಯ ಸದಸ್ಯರು ದಾಳಿ ನಡೆಸಿ ಆ ಬಳಿಕ ಮೈಮುಲ್’ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮೈಮುಲ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಂದಿನಿ ತುಪ್ಪದ ಹೆಸರಿನಲ್ಲಿ ಡಾಲ್ಡಾ ಪಾಮೊಲಿನ್ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ಹಾಗೂ ಕಲಬೆರಕೆ ತುಪ್ಪ ತಯಾರಿಸುತ್ತಿದ್ದೂದು ಕಂಡುಬಂದಿದೆ.
ಈ ವೇಳೆ ಅಧಿಕಾರಿಗಳು ಸುಮಾರು ಒಂದೂವರೆ ಟನ್‌ನಷ್ಟು ಕಲಬೆರಕೆ ತುಪ್ಪ, 500 ಕೆಜಿ ವನಸ್ಪತಿ, 500 ಲೀ. ಪಾಮೊಲಿನ್‌ನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ದಾಳಿಯ ಬಗ್ಗೆ ಮಾತನಾಡಿದ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಅವರು, ನಕಲಿ ತುಪ್ಪದ ಬಾಟಲಿ ಹಾಗೂ ಪ್ಯಾಕೆಟ್ ಮೇಲಿನ ಲೇಬಲ್ ಗಳಲ್ಲಿ ಪ್ರಿಟಿಂಗ್ ಬ್ಲರ್ ಆಗಿದ್ದು, ಜಿಗ್‌ಜಾಗ್ ರೀತಿಯಲ್ಲಿ ಸೀಲಿಂಗ್ ಮಾಡಲಾಗಿರುವುದನ್ನು ಗಮನಿಸಬಹುದು. ಮಾತ್ರವಲ್ಲದೆ ನಕಲಿ ಪ್ಯಾಕೆಟ್ ನಲ್ಲಿ ಕ್ವಾಲಿಟಿ ಮಾರ್ಕ್ ಇಲ್ಲ. ಹಾಗಾಗಿ ಗ್ರಾಹಕರು ಗೊಂದಲಕ್ಕೆ ಒಳಗಾಗದೇ ನಂದಿನಿ ಪಾರ್ಲರ್‌ಗಳಲ್ಲಿ ನಂದಿನಿ ತುಪ್ಪ ಖರೀದಿಸಬಹುದು’ ಎಂದು ಹೇಳಿದ್ದಾರೆ.