ಉಡುಪಿ: ವೀಕೆಂಡ್ ನಲ್ಲಿ ಏನಿರುತ್ತೆ? ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ

ಉಡುಪಿ, ಜ. 6 (Udupi News): ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಏರಿಕೆಯಾಗುತ್ತಿದೆ. ಪ್ರತಿದಿನ ಸರಾಸರಿ 4820 ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೋವಿಡ್ ಗಾಗಿ ಬೆಡ್ ಗಳನ್ನು ನಿಗದಿ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ರೌಂಡ್ಸ್ ಗಳನ್ನು ಕೂಡಾ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಕೆಯಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೊಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ತುರ್ತು ಮತ್ತು ಅವಶ್ಯಕ ಸೇವೆಗಳಿಗೆ ಅವಕಾಶ ಇದೆ. ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಭೂತ್ ಗಳು, ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳು ಕಾರ್ಯನಿರ್ವಹಿಸಲು ಅವಕಾಶವಿದೆ. ಬೀದಿಬದಿ ವ್ಯಾಪಾರಸ್ಥರು ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ ಎಂದರು.
ಇನ್ನು ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಲ್ಲಿ ಹೋಮ್ ಡೆಲಿವರಿಗೆ ಮಾತ್ರ ಅವಕಾಶ. ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200 ಒಳಾಂಗಣದಲ್ಲಿ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇದೆ. ಆದರೆ ಜಾತ್ರೆ ಮತ್ತು ಜನ ಸೇರುವ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ತುರ್ತು ಮತ್ತು ಅವಶ್ಯಕ ಸೇವೆಗೆ ಮಾತ್ರ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ. ಬೇಡಿಕೆಗೆ ಅನುಗುಣವಾಗಿ ಬಸ್ ಓಡಾಟಕ್ಕೆ ಅವಕಾಶ ಇದೆ. ವೀಕೆಂಡ್ ಕರ್ಫ್ಯೂ ನಲ್ಲಿ ಶಾಲಾ ಕಾಲೇಜು ನಡೆಯುವುದಿಲ್ಲ. ಪೂರ್ವ ನಿಗದಿತ ಪರೀಕ್ಷೆಗೆ ಹಾಜರಾಗಲು ಹಾಲ್ ಟಿಕೇಟ್ ತೋರಿಸಿ ಸಂಚರಿಸಬಹುದು. ಆದರೆ, ವೀಕೆಂಡ್ ನಲ್ಲಿ ಬಾರ್ ಗಳು ಬಂದ್ ಆಗಿರಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಕುರ್ಮಾ ರಾವ್ ಎಂ. ಹೇಳಿಕೆ ನೀಡಿದ್ದಾರೆ.