
ಜೂ09, ಕಾಪು ತಾಲೂಕಿನ ಇನ್ನಂಜೆ ಹಾಗೂ ಮಜೂರು ಗ್ರಾಮದ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನುಷ್ ತೀರ್ಥದಲ್ಲಿ ಮಂಗಳವಾರ ಸಂಜೆ ಹೊರಭಾಗದಿಂದ ಬಂದ ಕೆಲ ಯುವಕರು ಮದ್ಯಪಾನ ಮಾಡಿ ಮೋಜು ಮಾಡಿದ್ದಾರೆ. ತದನಂತರ ಕುಡಿದ ಮತ್ತಿನಲ್ಲಿ ತಮ್ಮ ಬೈಕ್ ಟಯರ್ ಗಳ ಬ್ಲೋ ತೆಗೆದಿದ್ದಾರೆಂದು ರಂಪಾಟ ನಡೆಸಿದ್ದಾರೆ. ಇದನ್ನು ಪರಿಸರದ ಯುವಕರು ಹಾಗೂ ಸ್ಥಳೀಯರು ತೀಕ್ಣವಾಗಿ ಖಂಡಿಸಿದ್ದು, ಪ್ರಸ್ತುತ ಸ್ಥಳವು ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ತಮಗೆಲ್ಲರಿಗೂ ಪೂಜನೀಯವಾಗಿದೆ. ಇದು ಇತ್ತೀಚೆಗೆ ಹೊರಗಿನಿಂದ ಬರುವ ಪ್ರೇಮಿಗಳ ಹಾಗೂ ಪುಂಡು ಪೋಕರಿಗಳ ಅಡ್ಡೆಯಾಗತ್ತಿದ್ದು, ಪ್ರತಿದಿನವೂ ಬಂಡೆಯಲ್ಲಿ ಮದ್ಯದ ಬಾಟಲ್ ,ಪ್ಲಾಸ್ಟಿಕ್ ರಾಶಿ ಬೀಳುತ್ತಿದ್ದು, ಮೇಲಿರುವ ತೀರ್ಥದ ಕೆರೆಯೂ ಕ್ರಮೇಣ ಮಲಿನಗೊಳ್ಳುತ್ತಿದೆ. ಪ್ರವಾಸಿ ತಾಣವಾಗಬೇಕಿದ್ದ, ಪ್ರೇಕ್ಷಣೀಯ ಸ್ಥಳವಾಗಬೇಕಿದ್ದ ಧನಸ್ಸು ತೀರ್ಥ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂದು ಕುಡುಕರ ಅಡ್ಡೆಯಾಗಿದೆ. ಆದರೂ ಇಂದೋ ನಾಳೆಯೋ ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಸಾರ್ವಜನಿಕರು ಕಾದು ಕುಳಿತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ, ಸಮಸ್ಯೆ ಪರಿಹಾರ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.