ಪಕ್ಷ ಸಂಘಟನೆಗೆ ವೇಗ ನೀಡಲು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ
ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ

ಪ್ರಸಕ್ತ ಬಿಜೆಪಿ ಜಿಲ್ಲಾ ತಂಡವು ಜ.27ರಂದು ಯಶಸ್ವೀ ಎರಡು ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಗಮನಲ್ಲಿಟ್ಟುಕೊಂಡು ಎಲ್ಲಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ವೇಗವನ್ನು ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಮಹಾ ಶಕ್ತಿಕೇಂದ್ರ ಕೇಂದ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗುವುದು. ಪಕ್ಷದ ಸಂಘಟನಾ ಸಾಮರ್ಥ್ಯದಿಂದ ಕಾಪು ಪುರಸಭೆಯಲ್ಲಿ ಗೆಲುವು ಸಾಧಿಸಲಾಗಿದೆ. ಜ.24, 25, 26ರಂದು ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಮತ್ತು ಪ್ರಮುಖ ಅಪೇಕ್ಷಿತರ ಪ್ರಶಿಕ್ಷಣ ವರ್ಗ ನಡೆಯಲಿದೆ ಎಂದರು.
ಮಹಾ ಶಕ್ತಿಕೇಂದ್ರಗಳಲ್ಲಿ ವಿಸ್ತಾರಕರಾಗಿ ಸೇವೆ ಸಲ್ಲಿಸುವ ಜೊತೆಗೆ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರ ನಾಮ ಫಲಕ ವಿತರಣೆ ಮುಂತಾದ ಪ್ರಮುಖ ಕೆಲಸ ಕಾರ್ಯಗಳಿಗೆ ಆದ್ಯತೆಯನ್ನು ನೀಡಿ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಸ್ಪಷ್ಟ ಗುರಿಯೊಂದಿಗೆ ಪಕ್ಷ ಸಂಘಟನೆಯನ್ನು ಸದೃಢಗೊಳಿಸುವಲ್ಲಿ ಎಲ್ಲರೂ ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಬಿಜೆಪಿ ನೀಡುವ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ ವೀಕ್ಷಣೆಯನ್ನು ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಆಯೋಜಿಸಿ ಗರಿಷ್ಠ ವೀಕ್ಷಣೆಗೆ ಅವಕಾಶ ಮಾಡಬೇಕು. ಬೂತ್ ಮಟ್ಟದಲ್ಲಿ ಪೇಜ್ ಪ್ರಮುಖ್ ಸಮಿತಿಯನ್ನು ರಚಿಸುವ ಜೊತೆಗೆ ಬೂತ್, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರಗಳನ್ನು ಇನ್ನಷ್ಟು ಸಕ್ರಿಯಗೊಳಿಸಬೇಕು. ಸದೃಢ ಪಕ್ಷ ಸಂಘಟನೆಯ ಮೂಲಕ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಯಾತ್ರೆಯನ್ನು ಮುಂದುವರಿಸಲು ಸರ್ವ ಸನ್ನದ್ಧರಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಸಂಘಟನಾತ್ಮಕ ವಿಚಾರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.