ರಾಜ್ಯ
ನಿಯಂತ್ರಣ ತಪ್ಪಿದ ಲಾರಿಯಡಿ ಸಿಲುಕಿ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ಸಾವು

ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಭಾನುವಾರ (ಜ.23) ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಪತ್ರಕರ್ತ, ವಿಜಯವಾಣಿ ಪತ್ರಿಕೆಯ ಉಪ ಸಂಪಾದಕ ಗಂಗಾಧರಮೂರ್ತಿ (48) ಅಸುನೀಗಿದ್ದಾರೆ.
ನಗರದ ಟೌನ್ ಹಾಲ್ ಎದುರು ನಿಯಂತ್ರಣ ತಪ್ಪಿದ ಲಾರಿಯೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಿದ್ದ ಪರಿಣಾಮ ಲಾರಿ ಅಡಿಗೆ ಸಿಲುಕಿ ಬೈಕ್ ಸವಾರ ಗಂಗಾಧರ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಗಂಗಾಧರಮೂರ್ತಿ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಗಂಗಾಧರ ಮೂರ್ತಿ ಬೈಕ್ನಲ್ಲಿ ಚಾಮರಾಜಪೇಟೆಯಲ್ಲಿರುವ ಕಚೇರಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ, ಕ್ರೇನ್ ಮೂಲಕ ಲಾರಿ ತೆರವು ಮಾಡಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಚಾಲಕನಿಗಾಗಿ ಹಲಸೂರು ಗೇಟ್ ಪೊಲೀಸರು ಹುಡುಕಾಟ ನಡೆಸಿದ್ದಾರೆ