ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಕೇರಳದ ಕಮ್ಯೂನಿಸ್ಟ್ ಸರಕಾರ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷದ ರಾಜಕೀಯ ಸಂಚು ಖೇದಕರ: ಕುಯಿಲಾಡಿ ಸುರೇಶ್ ನಾಯಕ್

‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಅಮೃತ ವಾಣಿಯನ್ನು ನಾಡಿಗೆ ನೀಡಿರುವ ದೀನ ದಲಿತೋದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕರು. ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಕೇರಳ ಸರಕಾರ ಪ್ರಾಯೋಜಿತ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ನಿಗದಿತ ತಾಂತ್ರಿಕ ಕಾರಣಗಳಿಂದ ಅವಕಾಶ ಸಿಗದೇ ಇರುವ ಬಗ್ಗೆ ವಸ್ತುಸ್ಥಿತಿಯ ಅರಿವಿದ್ದರೂ ಉದ್ದೇಶಪೂರ್ವಕವಾಗಿ ಕೇರಳದ ಕಮ್ಯೂನಿಸ್ಟ್ ಸರಕಾರ ಅನಗತ್ಯ ವಿವಾದವನ್ನು ಹುಟ್ಟುಹಾಕಿರುವುದು ಮತ್ತು ಈ ಸಂಚಿನಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷವೂ ಭಾಗಿಯಾಗಿರುವುದು ಖೇದಕರ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ದೇಶದೆಲ್ಲೆಡೆ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್, ಪ್ರಸಕ್ತ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಆಡಳಿತವನ್ನು ವಿರೋಧಿಸಲು ಯಾವುದೇ ಅಜೆಂಡಾ ಇಲ್ಲದೇ ಹತಾಶೆ ಸ್ಥಿತಿಯಲ್ಲಿದ್ದು ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ಸಮಾಜವನ್ನು ಒಡೆಯುವ ಕೀಳು ರಾಜಕಾರಣಕ್ಕೆ ಮುಂದಾಗಿರುವುದು ಖಂಡನೀಯ. ಇದರ ಲಾಭ ಪಡೆಯಲು ಎಸ್ಡಿಪಿಐ ನಂತಹ ಮೂಲಭೂತವಾದಿ ಮತೀಯ ಸಂಘಟನೆಗಳು ಹವಣಿಸುತ್ತಿರುವ ವಿಚಾರ ಅತ್ಯಂತ ಕಳವಳಕಾರಿಯಾಗಿದೆ.

ಮಂಗಳೂರಿನ ಲೇಡಿ ಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಮಂಗಳೂರು ಮಹಾ ನಗರಪಾಲಿಕೆಯ ಪ್ರಸ್ತಾವಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿರುವುದನ್ನು ಜನತೆ ಮರೆತಿಲ್ಲ. ಕೇರಳದಲ್ಲಿ ನಡೆದ ಅನೇಕ ಹಿಂದೂಗಳ ಕಗ್ಗೊಲೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಭಗ್ನ ಸಂದರ್ಭದಲ್ಲಿ ಗಾಢ ಮೌನ ವಹಿಸಿದ್ದ, ಹಿಂದೂ ಧರ್ಮ ಮತ್ತು ದೇವರ ಬಗ್ಗೆ ನಂಬಿಕೆ ಇಲ್ಲದ ಕಮ್ಯೂನಿಸ್ಟರು ಇದೀಗ ದಿಡೀರ್ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ವಿಶೇಷ ಭಕ್ತಿ ಭಾವ ಮೂಡಿರುವಂತೆ ನಟಿಸಿ ಸ್ತಬ್ದಚಿತ್ರ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಅನಗತ್ಯ ಗುಲ್ಲೆಬ್ಬಿಸಿರುವ ಹಿನ್ನೆಲೆಯನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರ್ಥೈಸಿಕೊಂಡಿದ್ದಾರೆ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೇರಳದ ಶಿವಗಿರಿಗೆ ಬೇಟಿ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಅನಾವರಣಗೊಳಿಸಿ, ‘ಸಂಘಟನೆಯಿಂದ ಬಲಾಯುತರಾಗಿರಿ; ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ಗುರುವರ್ಯರ ಗುರುವಾಣಿಯ ಗುಣಗಾನಗೈದಿರುವುದು ಪ್ರಶಂಸನೀಯ. ಇಂತಹ ಉದಾತ್ತ ಚಿಂತನೆಯ ಸಾಮಾಜಿಕ ಹರಿಕಾರರು, ಶ್ರೇಷ್ಠ ಸಂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಸಮಾಜದಲ್ಲಿ ಪ್ರಚಲಿತಗೊಳಿಸಿ ಗೌರವ ತರುವಂತಹ ಸತ್ಕಾರ್ಯವನ್ನು ಕೇರಳದ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಸರಕಾರ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಗೌರವಾರ್ಥವಾಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.26ರಂದು ಉಡುಪಿ ಜಿಲ್ಲೆಯಾದ್ಯಂತ ನಡೆಯಲಿರುವ ಜಾಥಾಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ, ಕಾಪು ಭಾಗಗಳಿಂದ ರಾ.ಹೆ. ಮೂಲಕ ಜಾಥಾದೊಂದಿಗೆ ಆಗಮಿಸಿ ಸಂಜೆ ಗಂಟೆ 4.00ಕ್ಕೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಪನಗೊಂಡು ನಡೆಯುವ ಸಾಮೂಹಿಕ ಗುರುಪೂಜೆಯಲ್ಲಿ ಭಾಗವಹಿಸುವ ಸಲುವಾಗಿ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತವೃಂದದೊಂದಿಗೆ ಗುರುವರ್ಯರಿಗೆ ಗೌರವ ಸೂಚಿಸುವ ಉದಾತ್ತ ಕಾರ್ಯಕ್ರಮದಲ್ಲಿ ಭಾಗಿಗಳಾಗೋಣ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!