ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಗೋ ಕಳ್ಳರು ..!

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಹೆದ್ದಾರಿಯಲ್ಲಿ ರವಿವಾರ ನಸುಕಿನ ವೇಳೆ ಗೋಕಳ್ಳರು ಅಟ್ಟಹಾಸದಿಂದ ಮೆರೆದಿದ್ದಾರೆ. ಪೋಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ನಸುಕಿನ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತಿದ್ದ ವೇಳೆ ಗೋವುಗಳನ್ನು ತುಂಬಿದ ಕಾರು ಮತ್ತು ರಕ್ಷಣೆ ಒದಗಿಸಲು ಬರುತಿದ್ದ ಬೈಕನ್ನು ರಸ್ತೆಗೆ ಬ್ಯಾರಿಕೇಡ್ ಅಡ್ಡ ಇಟ್ಟು ತಡೆಯಲು ಯತ್ನಿಸಿದ್ದಾರೆ. ಆ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಗಾಯಗೊಂಡರೂ ಎದೆ ಗುಂದದೆ ಪೊಲಿಸ್ ಜೀಪಿನಲ್ಲಿ ಕಾರು ಮತ್ತು ಬೈಕ್ ಅನ್ನು ಬೆನ್ನತ್ತಿದ್ದು. ಇದೆ ವೇಳೆ ಗೋವುಗಳಿದ್ದ ಕಾರು ಪರಾರಿಯಾಗಿದೆ. ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು ಆತನನ್ನು ಪೊಲಿಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬೈಕ್ ಸಂಪೂರ್ಣ ಹಾನಿಯಾಗಿದ್ದು, ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಒರ್ವ ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಕ್ರಮ ಗೋ ಸಾಗಾಟ ತಡೆಯುವ ವೇಳೆ ಕಾರಿನಲ್ಲಿದ್ದವರು ವಾಹನವನ್ನು ಮೈಮೇಲೆ ಹತ್ತಿಸಲು ಬಂದಿದ್ದು ನಾವು ಪ್ರಾಣಾಪಯದಿಂದ ಪಾರಾಗಿರುವುದು ನಿಜ. ನನಗೆ ಹಾಗೂ ಇನ್ನೋರ್ವ ಪೊಲೀಸ್ ಸಿಬಂದಿಗೆ ಘಟನೆಯಲ್ಲಿ ಗಾಯಗಳಾಗಿವೆ. ರಕ್ಷಣಾತ್ಮಕವಾಗಿದ್ದರಿಂದ ಪ್ರಾಣಾಪಾ ಯ ಸಂಭವಿಸಿಲ್ಲ.ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದುಕೊಂಡಿದ್ದೇವೆ. ಬೈಕ್ ನಲ್ಕಿದ್ದ ಓರ್ವ ಆರೋಪಿ ವಶದಲ್ಲಿದ್ದು ಆತನನ್ನು ತನಿಖೆ ನಡೆಸುತ್ತೇವೆ.ಹೆಚ್ಚಿನ ಮಾಹಿತಿ ಈಗ ಬಹಿರಂಗ ಪಡಿಸಲಾಗದು” ಎಂದು ಎಸ್ ಐ ತೇಜಸ್ವಿ ಅವರು ಮಾಹಿತಿ ನೀಡಿದ್ದಾರೆ.
ಕಾರ್ಕಳ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಗೋ ಕಳ್ಳರು ವ್ಯಾಪಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಬೀಡಾಡಿ ದನಗಳು ಮತ್ತು ಹೈನುಗಾರರ ಹಾಲು ನೀಡುವ ದನಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗೋ ಕಳ್ಳರ ಬಗ್ಗೆ ಅನೇಕ ಆರೋಪಗಳು ಕೇಳಿಬರುತ್ತಿದೆ.ಪೊಲೀಸರು ಮತ್ತು ಸಂಘಟನೆಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೂ ಗೋ ಕಳ್ಳತನ ಕಡಿಮೆಯಾಗಿಲ್ಲ.