ಕರಾವಳಿ

ಉಡುಪಿ: ಫೆ. 19 ರಂದು ಬ್ರಹ್ಮಾವರದ ಆರೂರು ಗ್ರಾಮದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

ಉಡುಪಿ : ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಅಶೋಕ್ ಅವರು ಫೆ. 19 ರಂದು ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಸಚಿವರ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಂದಾಯ ಸಚಿವರು ಮೊದಲಿಗೆ ಕಾರ್ಕಳ ತಾಲೂಕಿಗೆ ಭೇಟಿ ನೀಡಿ, ಅಲ್ಲಿ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮ, ಕಂದಾಯ ಮೇಳ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಬ್ರಹ್ಮಾವರ ತಾಲೂಕಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯುಕ್ತ ಕೊಕ್ಕರ್ಣೆ, ಆರೂರು ಮತ್ತು ಕೆಂಜೂರು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಗ್ರಾಮ ವಾಸ್ತವ್ಯದ ಪ್ರಯುಕ್ತ ಆಗಮಿಸುವ ಸಚಿವರನ್ನು ಕೊಕ್ಕರ್ಣೆಯ ಬಸ್ ನಿಲ್ದಾಣದ ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು, ಕೊಕ್ಕರ್ಣೆ ಕಾರ್ಯಕ್ರಮದ ನಂತರ ನಂತರ ಆರೂರು ತೆರಳುವ ಮಾರ್ಗದಲ್ಲಿ ಕುಡುಬಿ ಜನಾಂಗದವರ ಮನೆಗೆ ಬೇಟಿ ನೀಡಲಿದ್ದಾರೆ. ಸಂಜೆ ಆರೂರಿನಲ್ಲಿ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಯಕ್ಷಗಾನ , ವೀರಗಾಸೆ, ಡೊಳ್ಳು ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರು ಆರೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದು, ಸಚಿವರು ತಂಗಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರು ಕಂದಾಯ ಇಲಾಖೆಗೆ ಸಂಬಂಧಿಸಿದ 94 ಸಿ, ಸಿ.ಸಿ, ಸಾಮಾಜಿಕ ಭದ್ರತಾಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ, ಕೋವಿಡ್ ಪರಿಹಾರದ ಚೆಕ್ ವಿತರಣೆ ಹಾಗೂ ನಿವೇಶನದ ಹಕ್ಕು ಪತ್ರ , ವಿವಿಧ ಇಲಾಖೆಯ ಸವಲತ್ತುಗಳನ್ನು ವಿತರಿಸಲಿದ್ದು, ಪ್ರಮುಖ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡುವ ಸ್ಟಾಲ್ ಗಳನ್ನು ಅಳವಡಿಸಲು ಹಾಗೂ ಸಂಬಂದಪಟ್ಟ ಗ್ರಾಮಗಳ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಪೆಬ್ರವರಿ 20 ರಂದು ಬೆಳಗ್ಗೆ ಕೆಂಜೂರು ಗ್ರಾಮದ ಕೊರಗರ ಕಾಲೋನಿಗೆ ಸಚಿವರು ಭೇಟಿ ನೀಡಲಿದ್ದು, ಕೊರಗರ ಮನೆಯಲ್ಲಿ ಅವರೇ ಸಿದ್ದಪಡಿಸಿದ ಉಪಹಾರ ಸೇವಿಸಲಿದ್ದಾರೆ ಎಂದರು.ಸಚಿವರ ಗ್ರಾಮ ವಾಸ್ಯವ್ಯ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿಗಳು , ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಹಾಗೂ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರಿಂದ ಅಗತ್ಯ ಸಹಕಾರ ಪಡೆಯುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ.ನವೀನ್ ಭಟ್ ವೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮೀಷನರ್ ಕೆ.ರಾಜು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!