ಕಟಪಾಡಿ: ಮೊಗವೀರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟಕ್ಕೆ ಚಾಲನೆ

ಕಟಪಾಡಿ : ಅನಾದಿಕಾಲದಿಂದಲೂ ಮೊಗವೀರ ಸಮಾಜವು ಸಂಘಟನಾತ್ಮಕವಾಗಿ ಬಲಿಷ್ಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊಗವೀರ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಸಮಾಜದ ಕ್ರೀಡಾಳುಗಳನ್ನು ಒಗ್ಗೂಡಿಸಿ ಉತ್ತಮ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಕಟಪಾಡಿ ಪಳ್ಳಿಗುಡ್ಡೆ ನೆಹರೂ ಮೈದಾನದಲ್ಲಿ ಮಟ್ಟು ಕರಾವಳಿ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಮೊಗವೀರ ಸಮಾಜ ಬಾಂಧವರಿಗಾಗಿ ಮೂರು ದಿನಗಳ ಕಾಲ ನಡೆಯುವ ಮೊಗವೀರ ಪ್ರಿಮಿಯರ್ ಲೀಗ್ ಎಂಪಿಎಲ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಭಾಗದಲ್ಲಿ ಮೊಗವೀರ ಸಮಾಜದ ಮುಖಂಡರಾಗಿದ್ದ ಉದ್ಯಾವರ ಸದಿಯ ಸಾಹುಕಾರ್ ಅವರು ಸಾಕಷ್ಠು ದಾನಧರ್ಮಗಳನ್ನು ಮಾಡಿ ಹೆಸರಾಗಿದ್ದಾರೆ. ಮೊಗವೀರರ ಸ್ವಾಭಿಮಾನದ ಪ್ರತೀಕವಾದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸ್ಥಳದಾನ ಮಾಡಿರುವುದು ಮಾತ್ರವಲ್ಲದೆ ಉದ್ಯಾವರ ಬಿಲ್ಲವ ಮಹಾಜನ ಸಂಘಕ್ಕೂ ಸ್ಥಳದಾನ ಮಾಡಿ ಔದಾರ್ಯ ಮೆರೆದಿದ್ದಾರೆ ಎಂದರು. ಕಟಪಾಡಿಯ ನ್ಯಾಯವಾದಿ ಗಣೇಶ್ ಕುಮಾರ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕಟಪಾಡಿಯ ನೆಹರೂ ಮೈದಾನದಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಳುಗಳು ಬೆಳೆದು ಬಂದಿದ್ದಾರೆ. ಪ್ರಸ್ತುತ ಯುವ ಕ್ರೀಡಾಳುಗಳಿಗೆ ಮಕ್ತವಾಗಿ ತರಬೇತಿ ಪಡೆಯಲು ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್ ಅವರು ಪಂದ್ಯಾಕೂಟದ ಟ್ರೋಫಿ ಅನಾವರಣ ಗೊಳಿಸಿದರು. ಉಡುಪಿಯ ಉದ್ಯಮಿ ಶಂಕರ್ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜೇಶ್ ಅಂಬಾಡಿ, ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್, ಉದ್ಯಾವರ ಮೀನುಗಾರಿಕಾ ಮತ್ತು ಮೀನು ಉತ್ಪನ್ನ ಸಾಮಾಗ್ರಿಗಳ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ವಿ.ಸುವರ್ಣ, ಕೋಟೆ ಪಂಡರಿನಾಥ ಭಜನಾ ಮಂಡಳಿ ಅಧ್ಯಕ್ಷ ಪ್ರವೀಣ್ ಕಾಂಚನ್, ಕಟಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್, ಪಾಂಗಾಳಗುಡ್ಡೆ ಗರಡಿಮನೆ ಸುಧಾಕರ್ ಡಿ.ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ, ಕಡೆಕಾರು ಗ್ರಾಮ ಪಂಚಾಯಿತಿ ಸದಸ್ಯ ವಸಂತ್ ಕುಂದರ್ ಪಡುಕರೆ, ಮಟ್ಟು ಕರಾವಳಿ ಕ್ರಿಕೆಟರ್‍ಸ್ ಸಂಸ್ಥೆಯ ಪದಾಧಿಕಾರಿಗಳಾದ ಸುಚಿತ್, ಶ್ರೀಕಾಂತ್, ಶ್ರೀತೇಶ್, ಕಿಶೋರ್, ಸ್ವರಾಜ್, ಶೈಲೇಶ್,ಕಾರ್ತಿಕ್,ರಂಜೀತ್ ಉಪಸ್ಥಿತರಿದ್ದರು. ಮಟ್ಟು ಕರಾವಳಿ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ಚಂದ್ರಹಾಸ್ ಕೋಟ್ಯಾನ್ ಕೋಟೆ ಸ್ವಾಗತಿಸಿದರು. ನ್ಯಾಯವಾದಿ ರಾಜಕಿಶೋರ್ ಪಿ.ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು