ಪುತ್ತೂರು: ಭಜನಾ ಮಂದಿರ ವಿವಾದ- ಇತ್ತಂಡಗಳ ಹೊಡೆದಾಟ, ಮಹಿಳೆಗೆ ಹಲ್ಲೆ..!

ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ಭಜನಾ ಮಂದಿರದ ಪರಿಸರ ಸ್ವಚ್ಚತೆ ಮಾಡುತ್ತಿರುವ ಸಂದರ್ಭದಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಜಗಳ ನಡೆದು ಮಹಿಳೆಯರಿಬ್ಬರು ಸೇರಿದಂತೆ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಆರ್ಯಾಪು ಗ್ರಾಮದ ದೊಡ್ಡಡ್ಕ ಕೊಗ್ಗ ಆಚಾರ್ಯ ಎಂಬವರ ಪತ್ನಿ ಸರೋಜಿನಿ (58), ಅವರ ಪುತ್ರ ನಾರಾಯಣ (35), ಇನ್ನೊಂದು ತಂಡದ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ (44) ಮತ್ತು ಅವರ ಪತ್ನಿ ಪ್ರೇಮಲತಾ (40) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಆಸ್ಪತ್ರೆಗೆ ದಾಖಲಾಗಿರುವ ನಾರಾಯಣ ಪ್ರತಿಕ್ರಿಯಿಸಿ, ಭಜನಾ ಮಂದಿರವಿರುವ ಜಾಗವು ಅಕ್ರಮ ಸಕ್ರಮ ಮೂಲಕ ಮಂಜೂರುಗೊಂಡಿರುವ ಜಾಗವಾಗಿದ್ದು, ಅದರಲ್ಲಿ ನನ್ನ ತಂದೆಯವರು ಮನೆ ದೇವರಿಗೆ ಸಂಬಂಧಿಸಿ ಭಜನಾ ಮಂದಿರ ನಿರ್ಮಿಸಿ ಅಲ್ಲಿ ಭಜನೆಗಾಗಿ ಊರವರನ್ನು ಸೇರಿಸಿಕೊಳ್ಳುತ್ತಿದ್ದರು. ಬಳಿಕ ಸ್ಥಳೀಯರು ಅಲ್ಲಿ ಭಜನಾ ಸಂಘವನ್ನು ರಚಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು, ನ್ಯಾಯಾಲಯದಿಂದ ಸ್ಟೇ ಆಗಿದೆ. ಹಾಗಿದ್ದರೂ ಭಜನಾ ಮಂಡಳಿಯವರು ಅಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿದ್ದು, ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದಿದ್ದಾರೆ.
ಇನ್ನು ಭಜನಾ ಮಂಡಳಿಯ ಪೂವಪ್ಪ ನಾಯ್ಕ, ವೆಂಕಟಕೃಷ್ಣ ಭಟ್, ಜಗದೀಶ ಭಂಡಾರಿ, ರುಕ್ಮಯ ಮೂಲ್ಯ, ಸೇಸಪ್ಪ ನಾಯ್ಕ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಅಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಈ ಬಗ್ಗೆ ವಿಚಾರಿಸಲು ಹೋದ ನನ್ನ ತಾಯಿಗೆ ಗಂಭೀರ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಹುಲ್ಲು ಹೆರೆಯುವ ಯಂತ್ರದಿಂದ ಕೈಗೆ ಗಾಯ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ನನ್ನ ಹಾಗೂ ನಮ್ಮ ಮನೆಯವರಾದ ಪೂಜಾಶ್ರೀ ಮತ್ತು ದೀಪಾ ಅವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.