ಎನ್ಎಸ್ಇ ಮಾಜಿ ಸಿಇಒ ಚಿತ್ರಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್ಎಸ್ಇ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿ ಕೋರ್ಟ್ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸೋಮವಾರ ಈ ಆದೇಶ ಪ್ರಕಟಿಸಿದೆ. ಷೇರುಗಳನ್ನು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯ ದುರ್ಬಳಕೆ ಮಾಡಿಕೊಂಡ ಆರೋಪ ಚಿತ್ರಾ ಮೇಲಿದೆ. ಚಿತ್ರಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಕೋರ್ಟ್ಗೆ ತಿಳಿಸಿತು.
ಮನೆಯ ಊಟ ನೀಡಲು ಅನುಮತಿ ನೀಡುವಂತೆ ಚಿತ್ರಾ ಅವರ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು. ಇ ವೇಳೆ ನ್ಯಾಯಾಧೀಶರು, ನ್ಯಾಯಾಂಗ ಬಂಧನದಲ್ಲಿಯೂ ಊಟ ಚೆನ್ನಾಗಿಯೇ ಇರುತ್ತದೆ. ನಾನೂ ಅಲ್ಲಿನ ಊಟ ಮಾಡಿರುವೆ ಎಂದು ಹೇಳಿದರೆಂದು ಎನ್ನಲಾಗಿದೆ.
ಚಿತ್ರಾ ಅವರೇನೂ ವಿಐಪಿ ಅಲ್ಲ ಎಂದ ನ್ಯಾಯಾಧೀಶರು, ಎಲ್ಲ ಬಂದಿಗಳೂ ಒಂದೇ. ಅವರೇನೂ ವಿಐಪಿ ಅಲ್ಲ ಎಂದರು.
ಸಿಬಿಐ ಮಾರ್ಚ್ 6ರಂದು ಚಿತ್ರಾ ಅವರನ್ನು ಬಂಧಿಸಿತ್ತು. ಚಿತ್ರಾ ಅವರು ಸುಬ್ರಮಣಿಯನ್ ಅವರನ್ನು ತಮ್ಮ ಸಲಹೆಗಾರ ಆಗಿ 2013ರಲ್ಲಿ ನೇಮಕ ಮಾಡಿದ್ದರು. ನಂತರ ಅವರಿಗೆ ಜಿಒಒ ಆಗಿ ಬಡ್ತಿ ನೀಡಲಾಗಿತ್ತು.