ರಾಜ್ಯ

ಜೋರಾಯ್ತು ಮಡಿಕೇರಿಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ಕೂಗು

ಆಸ್ಪತ್ರೆ ಸ್ಥಾಪನೆಗೆ 1 ಕೋಟಿ ರೂಪಾಯಿ ಹಣ ಹಾಗೂ ಜಾಗ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದ ಸ್ಯಾನ್‌ ಎಂಡಿ ಡಾ. ವಿಶ್ವ ಕಾರ್ಯಪ್ಪ -ಜನಾಂದೋಲನ ಕಾರ್ಯಕ್ರಮ ರೂಪಿಸಲು ಕ್ರಮ

ಬೆಂಗಳೂರು : ಭಾರತದ ಸ್ವಿಟ್ಜರ್‌ಲ್ಯಾಂಡ್‌ ಎಂದೇ ಪ್ರಸಿದ್ದಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಒಂದೂ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳು ಇಲ್ಲ. ಇದರಿಂದ ಅಪಘಾತಗಳು ಹಾಗೂ ತೀವ್ರ ಅನಾರೋಗ್ಯದ ಸನ್ನಿವೇಶಗಳಲ್ಲಿ ಅಕ್ಕಪಕ್ಕದ ಜಿಲ್ಲೆಯ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡೊಯ್ಯುವ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಪರಿಹಾರ ನೀಡಬೇಕು ಎನ್ನುವ ಉದ್ದೇಶದಿಂದ ಮಡಿಕೇರಿಯಲ್ಲಿ ರಾಜ್ಯ ಸರಕಾರದಿಂದ ಒಂದು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎನ್ನುವ ಕೂಗು ಈಗ ಮತ್ತಷ್ಟು ಜೋರಾಗಿದೆ.

ಭಾರತೀಯ ಸೇನೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಕೊಡವರ ಜಿಲ್ಲೆಯಾದ್ಯಂತ ಯಾವುದೇ ಮಲ್ಟಿ ಅಥವಾ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಇಲ್ಲದೆ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರಕಾರದ ವತಿಯಿಂದ ಯಾವುದೇ ಮಲ್ಟಿ ಸ್ಪೇಷಾಲಿಟಿ ಅಥವಾ ಸೂಪರ್‌ ಸ್ಪೇಷಾಲಿಟಿ ಚಿಕಿತ್ಸೆಯನ್ನು ನೀಡುವ ಚಿಕಿತ್ಸಾ ಕೇಂದ್ರಗಳು ಇಲ್ಲ. ಗುಡ್ಡಗಾಡಿನಿಂದ ಕೂಡಿರುವ ಈ ಜಿಲ್ಲೆಯಲ್ಲಿ 2018 ರಲ್ಲಿ ಅಪ್ಪಳಿಸಿದ ಪ್ರವಾಹದಿಂದ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿದ್ದ ಕೊಡಗು ಜಿಲ್ಲೆಯ ಆರ್ಥಿಕತೆಗೆ ಕರೋನಾ ದೊಡ್ಡ ಪೆಟ್ಟನ್ನೇ ನೀಡಿದೆ. ಈ ಆಘಾತಗಳಿಂದ ತೊಂದರೆಗೀಡಾಗಿರುವ ಜನರು ಅನಾರೋಗ್ಯದ ಚಿಕಿತ್ಸೆಗೂ ಬೇರೆ ಜಿಲ್ಲೆಗಳಿಗೆ ಎಡತಾಕಬೇಕಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಜಿಲ್ಲೆಯಲ್ಲಿ ಒಂದು ಮಲ್ಟಿಸ್ಪೇಷಾಲಿಟಿ ಅಥವಾ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆಸ್ಪತ್ರೆಯನ್ನು ಸೂಪರ್‌ ಸ್ಪೇಷಾಲಿಟಿ ಚಿಕಿತ್ಸೆ ದೊರೆಯುವಂತೆ ಉನ್ನತೀಕರಿಸಬೇಕು ಎಂದು ಕೊಡಗಿನ ಉದ್ಯಮಿ ಸ್ಯಾನ್‌ ಗ್ರೂಪ್‌ ಆಫ್‌ ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವ ಕಾರ್ಯಪ್ಪ ಬಿ.ಎಸ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲೆಯ ಬಡಜನರು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡುವಂತೆ ಪತ್ರದಲ್ಲಿ ನಾನು ಕೋರಿಕೆಯನ್ನು ಸಲ್ಲಿಸಿದ್ದೇನೆ. ಅಲ್ಲದೆ, ಮಲ್ಟಿ ಸ್ಪೇಷಾಲಿಟ ಆಸ್ಪತ್ರೆಯ ನಿರ್ಮಾಣಕ್ಕೆ ನನ್ನ ಸಂಸ್ಥೆಯ ವತಿಯಿಂದ 1 ಕೋಟಿ ರೂಪಾಯಿಗಳ ಹಣವನ್ನು ಹಾಗೂ ಅಗತ್ಯವಿರುವ ಜಾಗವನ್ನೂ ನೀಡಲು ಮುಂದಾಗಿದ್ದೇನೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದ್ದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣವಾಗುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇನೆ. ಇಲ್ಲದಿದ್ದಲ್ಲಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸುವುದಾಗಿ ಎಂದು ಸ್ಯಾನ್‌ ಗ್ರೂಪ್‌ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ ವಿಶ್ವ ಕಾರ್ಯಪ್ಪ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!