ಗ್ರಾಮ ವಿದ್ಯುತ್ ಪ್ರತಿನಿಧಿಗಳು ಆಮಿಷಕ್ಕೆ ಬಲಿಯಾಗದಿರಿ : ಸಚಿವ ಸುನಿಲ್

ಬೆಂಗಳೂರು : ಕೆಲವು ಬಾಹ್ಯ ಶಕ್ತಿಗಳು ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಖಾಯಂ ಮಾಡಿಸಲಾಗುವುದು ಎಂದು ಧನ ಸಂಗ್ರಹ ಮಾಡುತ್ತಿದ್ದು, ಇಂತಹ ಆಮಿಷಗಳಿಗೆ ಯಾರೂ ಒಳಗಾಗಬಾರದೆಂದು ಇಂಧನ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲಾ ವ್ಯಾಪ್ತಿಗಳಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಖಾಯಂಗೊಳಿಸುವುದಾಗಿ ನಂಬಿಸಿ ಕೆಲವರು ಹಣ ಸಂಗ್ರಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಆಮಿಷಗಳಿಗೆ ಯಾರೂ ಬಲಿಯಾಗದೇ, ಯಾರಾದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಇಲಾಖೆಯ ಗಮನಕ್ಕೆ ತರಬೇಕು. ಇಲಾಖೆ ಅಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಗೌರವ ಧನ ಪರಿಷ್ಕರಣೆ ಹಾಗೂ ಸೇವೆ ಖಾಯಂಗೊಳಿಸುವ ವಿಚಾರಕ್ಕೆ ಇರುವ ತಾಂತ್ರಿಕ ಅಡಚಣೆಗಳ ಬಗ್ಗೆ ವರದಿ ನೀಡುವುದಕ್ಕಾಗಿ ಈಗಾಗಲೇ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದ್ದು, ಆ ಸಮಿತಿ ಇನ್ನೂ ವರದಿ ನೀಡಿಲ್ಲ ಎಂದು ಹೇಳಿದರು.