ಕರಾವಳಿ
Trending

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಸಕಲ ಸಿದ್ಧತೆ :ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ  : ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಕುರಿತಂತೆ, ಜಿಲ್ಲೆಯ ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸುಗಮ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಗುರುವಾರ , ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸುವ ಕುರಿತ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಾಕ್ ಡೌನ್ ಕಾರಣದಿಂದ ಬಾಕಿಯಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಜೂನ್ 18 ರಂದು ನಡೆಯುತ್ತಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಹೆಚ್ಚುವರಿಯಾಗಿ 2 ಹೆಚ್ಚುವರಿ ಬ್ಲಾಕ್ ಗಳನ್ನು ಗುರುತಿಸಲಾಗಿದೆ, ಒಟ್ಟು 13547 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಹೊರ ಜಿಲ್ಲೆಗಳಿಂದ 160 ಮತ್ತು ಹೊರ ರಾಜ್ಯದಿಂದ 1 ವಿದ್ಯಾರ್ಥಿಗಳು ಆಗಮಿಸಲಿದ್ದು, ಜಿಲ್ಲೆಯ 1344 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡಿದ್ದಾರೆ, ಪ್ರಶ್ನೆ ಪತ್ರಿಕೆ ವಿತರಿಸಲು 8 ತಂಡಗಳನ್ನು ರಚಿಸಲಾಗಿದ್ದು, ಪ್ರತೀ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ನೇಮಿಸಲಾಗಿದ್ದು,ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಜೂನ್ 18 ರಂದು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಕೆ.ಎಸ್.ಆರ್.ಟಿ.ಸಿ.ಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತಿದ್ದು, ಎಷ್ಟು ವಿದ್ಯಾರ್ಥಿಗಳು ಸ್ವಂತ ವಾಹನದಲ್ಲಿ ಬರುತ್ತಾರೆ, ಖಾಸಗಿ ವಾಹನದಲ್ಲಿ ಬರುತ್ತಾರೆ ಹಾಗೂ ಎಷ್ಟು ವಿದ್ಯಾರ್ಥಿಗಳಿಗೆ ಬಸ್ ನ ಅವಶ್ಯಕತೆಯಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಗತ್ಯವಿರುವೆಡೆ ಬಸ್ ವ್ಯವಸ್ಥೆ ಮಾಡಲು ರೂಟ್ ಮ್ಯಾಪ್ ಸಿದ್ದಪಡಿಸುವಂತೆ ಪ.ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯ ಯಾವುದೇ ಒಬ್ಬ ವಿದ್ಯಾರ್ಥಿ ಬಸ್ ವ್ಯವಸ್ಥೆ ಇಲ್ಲವೆಂದು ಪರೀಕ್ಷೆಗೆ ಗೈರು ಹಾಜರಾಗದಂತೆ ಎಚ್ಚರವಹಿಸುವಂತೆ ಸೂಚಿಸಿದರು. ಪಿ.ಯು ಇಲಾಖೆಯಿಂದ ಸಿದ್ದಪಡಿಸುವ ರೂಟ್ ಮ್ಯಾಪ್ ಅನುಗುಣವಾಗಿ ನಿಗಧಿತ ಸಂಖ್ಯೆಯ ಬಸ್ ಗಳನ್ನು ಒಗದಿಸಿ , ಯಾವುದೇ ವಿದ್ಯಾರ್ಥಿ ಬಸ್ ನಿಂದ ವಂಚಿತನಾಗದAತೆ ಕರೆತರುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ವಿದ್ಯಾರ್ಥಿಗಳನ್ನು ಕರೆತರುವಾಗ ಬಸ್ ಗಳಲ್ಲಿ ನಿಗಧಿತ ಸಾಮಾಜಿಕ ಅಂತರ ಕಾಯ್ದುಕೊಂಡು ಕರೆತರುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವ ಮುನ್ನ ಎಲ್ಲಾ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸುವಂತೆ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಹಾಗೂ ಯಾವುದೇ ವಿದ್ಯಾರ್ಥಿಗೆ ಜ್ವರ, ಶೀತ ಇದ್ದಲ್ಲಿ ಮತ್ತು ಕಂಟೋನ್ಮೆಂಟ್ ಪ್ರದೇಶದಿಂದ ಬರುವವರಿಗಾಗಿ ಎಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚಿಸಿದರು.

ಕಂಟೋನ್ಮೆಂಟ್ ಪ್ರದೇಶ ಅಥವಾ ಸೀಲ್ ಡೌನ್ ಮನೆಗಳಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಮತಿಯನ್ನು ನೀಡುವಂತೆ ಹಾಗೂ ವಾಹನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪರೀಕ್ಷಾ ಕೆಂದ್ರಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಿಕೊಂಡಿದ್ದಲ್ಲಿ ಅದನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಪ್ರತೀ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಲು ಅನುಕೂಲವಾಗುವಂತೆ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡುವಂತೆ ಎಲ್ಲಾ ಕೇಂದ್ರಗಳ ಮೇಲ್ವಿಚಾರಕರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಗೆ ಅನಾನುಕೂಲವಾಗದಂತೆ, ಅತ್ಯಂತ ವ್ಯವಸ್ಥಿತವಾಗಿ , ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಂಡು, ಎಲ್ಲಾ ಅಧಿಕಾರಿ ಪರಸ್ಪರ ಸಮನ್ವಯಯಿಂದ ಕಾರ್ಯ ನಿರ್ವಹಿಸಿ, ರಾಜ್ಯಕ್ಕೆ ಮಾದರಿಯಾಗುವಂತೆ ಪರೀಕ್ಷೆ ನಡೆಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಭಗವಂತ ಕಟ್ಟೀಮನಿ, ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು, ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!