ಈ ಶೈಕ್ಷಣಿಕ ಸಾಲಿನಲ್ಲಿ 8 ಹೊಸ ಡಿಪ್ಲೋಮಾ ಕೋರ್ಸ್‌ಗಳ ಆರಂಭ…. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್‍ರಿಂದ ಇಂದು ಚಾಲನೆ…

ಬೆಂಗಳೂರು : ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ರವರು ನೂತನ ಕೋರ್ಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಜೊತೆಗೆ ಮೊದಲ ಬಾರಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗೆ ಹೊಸ ಲೋಗೋ ಬಿಡುಗಡೆ ಮಾಡಿದರು. ಉದ್ಯೋಗ ಮಾರುಕಟ್ಟೆ ಕೈಗಾರಿಕಾ ಬೇಡಿಕೆಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲ ಒದಗಿಸುವ ಉದ್ದೇಶದಿಂದ 8 ಹೊಸ ಡಿಪ್ಲೋಮಾ ಕೋರ್ಸ್‌ಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೆಚ್ಚು ಉದ್ಯೋಗವಕಾಶ ಸೃಷ್ಟಿಸುವುದು, ಕೈಗಾರಿಕೆಗಳಿಗೆ ಉತ್ಕೃಷ್ಟ ಮಾನವ ಸಂಪನ್ಮೂಲ ಒದಗಿಸುವುದೇ ಹೊಸ ಕೋರ್ಸ್‌ಗಳ ಗುರಿಯಾಗಿದೆ. ಡಿಪ್ಲೋಮಾದಲ್ಲಿ ಸದ್ಯ 33 ಕೋರ್ಸ್‌ಗಳಿದ್ದು, ಈ ಪೈಕಿ ಹಳೆಯ ಮತ್ತು ಅಪ್ರಸ್ತುತ ಎನಿಸಿದ ಕೋರ್ಸ್‌ಗಳನ್ನು ರದ್ದು ಮಾಡಲಾಗಿದೆ. ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದ್ದು, ಈ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ 8 ಹೊಸ ಕೋರ್ಸ್‌ಗಳನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ’ ಎಂದು ಸಚಿವ ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದರು.
ಆಲ್ಟ್ರನೇಟಿವ್ ಎನರ್ಜಿ ಟೆಕ್ನಾಲಜೀಸ್, ಸೈಬರ್ ಸೆಕ್ಯೂರಿಟಿ, ಫುಡ್ ಪ್ರೊಸೆಸಿಂಗ್ ಅಂಡ್ ರಿಸರ್ವವೇಷನ್, ಟ್ರಾವೆಲ್ ಅಂಡ್ ಟೂರಿಸಂ, ಕ್ಲೌಡ್ ಕಂಪ್ಯೂಟಿಂಗ್, ಆಟೋಮೇಷನ್ ಅಂಡ್ ರೋಬೋಟಿಕ್ಸ್, ಡೈರೆಕ್ಷನ್ ಸ್ಕ್ರೀನ್ ಪ್ಲೇ, ರೈಟಿಂಗ್ ಅಂಡ್ ಟಿವಿ ಪ್ರೊಡಕ್ಷನ್, ಸೈಬರ್ ಫಿಸಿಕಲ್ ಸಿಸ್ಟಮ್ ಅಂಡ್ ಸೆಕ್ಯೂರಿಟಿ ಗಳೇ 8 ಹೊಸ ಡಿಪ್ಲೋಮಾ ಕೋರ್ಸ್‌ಗಳಾಗಿವೆ. ಈ ನೂತನ ಕೋರ್ಸ್‌ಗಳನ್ನು ಗೌರಿಬಿದನೂರು, ಶಿರಾಳಕೊಪ್ಪ, ಕೂಡ್ಲಗಿ, ರಬಕವಿ, ಬನಹಟ್ಟಿ, ಔರಾದ್, ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್, ಚನ್ನಗಿರಿ ಕೊಪ್ಪ ಹೊನ್ನಾಳಿ ಹಾಗೂ ಕಾಪು ಕಾಲೇಜುಗಳಲ್ಲಿ ಈ ಪ್ರಾರಂಭಿಸಲಾಗುವುದು ಎಂದು ಮಾಹಿತಿ ಕೊಟ್ಟರು. ನೂತನ ಕೋರ್ಸ್‌ಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ ಪಠ್ಯಕ್ರಮದಂತೆ ಬೋಧನೆ ಮಾಡಲಾಗುತ್ತದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಪ್ರಕಾರ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪಠ್ಯಕ್ರಮವನ್ನು ಉದ್ಯಮಿಗಳು, ಶಿಕ್ಷಣ ತಜ್ಞರು, ಹಳೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಸಿದ್ದಪಡಿಸಲಾಗಿದೆ. ಇದು ಉದ್ಯೋಗ ಮತ್ತು ಉದ್ಯಮಶೀಲತೆ ಎರಡನ್ನೂ ಕಲಿಸುತ್ತದೆ ಎಂದು ತಿಳಿಸಿದರು.
ಮುಂದೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾತನಾಡಿ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೇರ ಪ್ರವೇಶಾತಿ ಸಿಗುತ್ತದೆ. ಆದರೆ ಮೂರನೇ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ವಿಷಯವಾಗಿರುತ್ತದೆ, 2 ನೇ ವರ್ಷದ ಡಿಪ್ಲೋಮಾ ನಂತರ 3 ನೇ ವರ್ಷದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳು ಡಾಟಾ ಸೈನ್ಸ್, ವಿದ್ಯುತ್ ಇಂಜಿನಿಯರಿಂಗ್ ರೆನಿವಬಲ್ ಎನರ್ಜಿ, ಇಂಡಸ್ಟ್ರಿಲ್ ಆಟೋಮೇಷನ್ ಅಂಡ್ ಇಂಡಸ್ಟ್ರೀಯಲ್ ಎಲೆಕ್ಟ್ರಲ್ ಇಂಜಿನಿಯರಿಂಗ್ ಸೇರಿದಂತೆ ಹಲವಾರು ವಿಷಯಗಳನ್ನು ಆಯ್ಕೆಗೆ ಅಧ್ಯಯನ ಮಾಡಬಹುದು. ರಾಜ್ಯದಲ್ಲಿ ಒಟ್ಟು 87 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. 26 ಕಾಲೇಜುಗಳಲ್ಲಿ ಮೆರಿಟ್ ಮೇಲೆ ಪ್ರವೇಶ ನೀಡಲಾಗುತ್ತಿದ್ದು, ಉಳಿದ ಕಾಲೇಜುಗಳಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ ಪಠ್ಯಕ್ರಮ ಅನುಸಾರ ಬೋಧನೆ ಮಾಡಲಾಗುವುದು. ಪಾಲಿಟೆಕ್ನಿಕ್ ತರಗತಿಗಳಲ್ಲಿ ಡಿಜಿಟಲ್ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ಕ್ಲಾಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆಯನ್ನು ಸಕ್ರಿಯಗೊಳಿಸಲು ಟಾಬ್ಲೆಟ್, ಪಿಸಿಗಳನ್ನು ಕಳೆದ ವರ್ಷ ನೀಡಿದ್ದು, ಈ ವರ್ಷವೂ ನೀಡುವ ಉದ್ದೇಶವಿದ್ದು, ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದರು.