ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ಹಾಕಲು ಬಿಡಲ್ಲ- ಯೆಶ್ವಾಲ್ ಸುವರ್ಣ

ಉಡುಪಿ : ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ಹಾಕಲು ಬಿಡುವುದಿಲ್ಲ ಎಂದು ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ವಾಲ್ ಸುವರ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಹಿಜಾಬ್ ಹೋರಾಟದ ವಿದ್ಯಾರ್ಥಿನಿಯರು ಹಿಜಾಬ್
ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡದ ಕಾರಣ ಪರೀಕ್ಷೆಯನ್ನು ತ್ಯಜಿಸಿ ವಾಪಾಸ್ಸಾದ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಹಿಜಾಬ್ ಕುರಿತ 6
ಹೋರಾಟಗಾರ್ತಿಯರು ಭಯೋತ್ಪಾದಕರು, ಅವರಿಂದ ಜನರು ಎಚ್ಚರಗೊಂಡಿದ್ದಾರೆ. ಹಿಜಾಬ್ ಧರಿಸಿ ಹೋಗುವವರನ್ನು ನೋಡಿದ್ರೆ ಮುಂದಿನ ದಿನ ಜನರು ಭಯಪಡುವ ವಾತಾವರಣ
ಸೃಷ್ಟಿಯಾಗಬಹುದು. ಹಾಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ಹಾಕಲು ಬಿಡಲ್ಲ, ಶಾಲಾ ಕಾಲೇಜಿನಲ್ಲಿ ಮಾತ್ರವಲ್ಲ ಹಿಜಾಬನ್ನು ಹೊರಗಡೆ ಹಾಕದೇ ಇರೋ ಪರಿಸ್ಥಿತಿ ಬರುತ್ತೆ ಎಂದು ಹೇಳಿದ್ದಾರೆ.
ಹಿಜಾಬ್ ಹೋರಾಟದ ವಿದ್ಯಾರ್ಥಿನಿಯರಿಗೆ ಈ ಹಿಂದೆಯೇ ಅನೇಕ ಬಾರಿ ಮನವರಿಕೆ ಮಾಡಿದ್ದೇವೆ ,
ಮುಸ್ಲಿಂ ಧಾರ್ಮಿಕ ಮುಖಂಡರೂ ಶಿಕ್ಷಣದ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಆದರೆ ಇವರು ಬುದ್ದಿ ಕಲಿಯಲಿಲ್ಲ ಎಂದರೆ ನಾವೇನು ಮಾಡುವುದಕ್ಕೆ ಆಗುತ್ತೆ ಎಂದಿದ್ದಾರೆ.
ಇದೇ ವೇಳೆ ಫ್ರಾನ್ಸ್ ಗೂ ಉಡುಪಿಯ ಹಿಜಾಬ್ ವಿಚಾರ ಪ್ರೇರಣೆಯಾಗಿದೆ ಎಂದ ಅವರು, ಇದು
ಖುಷಿಯ ವಿಚಾರ. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯ, ರಾಷ್ಟ್ರ ಮಾತ್ರವಲ್ಲ
ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಫ್ರಾನ್ಸ್ ರಾಜಕೀಯ ಪಕ್ಷದ ಪ್ರಣಾಳಿಕೆ ಹಿಜಾಬ್
ಬ್ಯಾನ್ ಮತ್ತು ಹಲಾಲ್ ಬ್ಯಾನ್ ಆಗಿದೆ. ಇದು ಮುಂದೆ ಎಲ್ಲಾ ರಾಷ್ಟ್ರಗಳಲ್ಲೂ ಮುಂದುವರಿಯಲಿದೆ
ಎಂದು ಹೇಳಿದ್ದಾರೆ.
ಇನ್ನು ಈಗಾಗಲೇ ಬೂದಿ ಮುಚ್ಚಿದ ಕೆಂಡದಂತಿರುವ ಹಿಜಾಬ್ ವಿವಾದ ಯಶ್ವಾಲ್ ಸುವರ್ಣ ಅವರ ಈ
ವಿವಾದಾತ್ಮಕ ಹೇಳಿಕೆಯಿಂದ ಮತ್ಯಾವ ರೀತಿ ತಿರುವು ಪಡೆದುಕೊಳ್ಳುತ್ತದೋ ಎಂಬ ಮಾತುಗಳು
ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.