ಮಂಗಳೂರು ಕಮೀಷನರ್ ಎನ್. ಶಶಿಕುಮಾರ್ ವರ್ಗಾವಣೆ – ನೂತನ ಕಮೀಷನರ್ ಆಗಿ ಕುಲದೀಪ್ ಕುಮಾರ್ ಆರ್.ಜೈನ್ ನೇಮಕ

ಮಂಗಳೂರು : ಮಂಗಳೂರು ನಗರ ಕಮೀಷನರ್ ಆಗಿದ್ದ ಎನ್. ಶಶಿಕುಮಾರ್ ಅವರಿಗೆ ವರ್ಗಾವಣೆಯಾಗಿದೆ.
ಮಂಗಳೂರಿನ ನೂತನ ಕಮೀಷನರ್ ಆಗಿ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.
ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆ ಪೊಲೀಸ್ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದ್ದು, ಇವರ ಜೊತೆ ಕೋನ ವಂಶಿ ಕೃಷ್ಣ ಅವರನ್ನೂ ಕೂಡ ವಯರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಸುಮಾರು ಎರಡು ವರ್ಷಗಳಿಗೂ ಅಧಿಕ ಕಾಲ ಮಂಗಳೂರು ನಗರ ಕಮೀಷನರ್ ಆಗಿದ್ದ ಎನ್.ಶಶಿಕುಮಾರ್ ಆರಂಭದ ದಿನಗಳಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಹಲವು ಪ್ರಕರಣಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದರು.
ಆದರೆ ಇತ್ತೀಚೆಗೆ ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳು ಕೂಡ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅವರ ವರ್ಗಾವಣೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.