ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಲು ಕುಯಿಲಾಡಿ ಕರೆ
ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳ ಸಭೆ

‘ಮೇರಾ ಬೂತ್ ಸಬ್ಸೇ ಮಜ್ಬೂತ್’ ಎಂಬ ತತ್ವದಡಿ ಪ್ರತಿಯೊಂದು ಬೂತ್ ಗಳನ್ನು ಗೆಲ್ಲುವ ಗುರಿಯೊಂದಿಗೆ ಬೂತ್ ಮತ್ತು ಶಕ್ತಿಕೇಂದ್ರಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಮೇ 2ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇ 7ರಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜಿಲ್ಲಾ ಕಾರ್ಯಕಾರಿಣಿ ಸಭೆಯ ಮೊದಲು ಹಾಗೂ ಪ್ರತೀ ತಿಂಗಳಿಗೊಮ್ಮೆ ಎಲ್ಲಾ ಮಹಾ ಶಕ್ತಿಕೇಂದ್ರಗಳ ಸಭೆಯನ್ನು ಕಡ್ಡಾಯವಾಗಿ ನಡೆಸಿ ಸಭೆಯ ವರದಿಯನ್ನು ಜಿಲ್ಲೆಗೆ ಸಲ್ಲಿಸುವ ಜೊತೆಗೆ ಶಕ್ತಿಕೇಂದ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡುವಂತೆ ಅವರು ತಿಳಿಸಿದರು.
ವಿಸ್ತಾರಕ ಯೋಜನೆಯ ಪರಿಪೂರ್ಣ ಅನುಷ್ಠಾನ, ಬೂತ್ ಅಧ್ಯಕ್ಷರ ನಾಮ ಫಲಕ ಅನಾವರಣ, ಬೂತ್ ಸಮಿತಿ ಮತ್ತು ಶಕ್ತಿಕೇಂದ್ರಗಳ ಪ್ರಮುಖರ ಸಹಿತ ಕೀ ವೋಟರ್ಸ್ ಯಾದಿ ರಚನೆಯ ಪರಿಶೀಲನೆ, ಮೈಕ್ರೋ ಡೊನೇಶನ್‌ಗೆ ವೇಗ ನೀಡುವುದು ಹಾಗೂ ಶಕ್ತಿಕೇಂದ್ರಗಳಿಗೆ ಮಂಡಲಗಳ ಪದಾಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸುವ ನಿಟ್ಟಿನಲ್ಲಿ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕುಯಿಲಾಡಿ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಮತ್ತು ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಉಪಸ್ಥಿತರಿದ್ದರು.